



ಬಂಟ್ವಾಳ: ಮಂಗಳೂರು-ಬೆಂಗಳೂರು ಮಧ್ಯೆ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಮಹಿಳೆಯರು ಸೇರಿ ಸಹಜ ಹೆರಿಗೆ ಮಾಡಿಸಿದ ಘಟನೆ ರವಿವಾರ ಮುಸ್ಸಂಜೆ ಬಂಟ್ವಾಳ ಸಮೀಪದ ಬಿ.ಸಿ.ರೋಡ್ ಬಳಿ ನಡೆದಿದೆ.
ಮಂಗಳೂರು ಜಂಕ್ಷನ್ನಿಂದ ಹೊರಟ ರೈಲಿನಲ್ಲಿ ಮೈಸೂರು ಮೂಲದ ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿತ್ತು. ರೈಲು ಬಿ.ಸಿ.ರೋಡ್ ತಲುಪಿದಾಗ ಗರ್ಭಿಣಿಗೆ ತೀವ್ರ ರಕ್ತಸ್ರಾವವೂ ಆಗಿದ್ದು, ಈ ಹಿನ್ನೆಲೆಯಲ್ಲಿ ತಕ್ಷಣ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು.
ಮೈಸೂರು ಮೂಲದ ಮಹಿಳೆ ಮಂಗಳೂರಿನಲ್ಲಿ ರೈಲು ಹತ್ತಿದ್ದರು. ಸ್ವಲ್ಪ ಮುಂದೆ ಬರುವ ವೇಳೆಗೆ ಇವರಿಗೆ ಹೆರಿಗೆಯ ನೋವು ಬಂದಿದ್ದು, ಬೆಂಗಳೂರಿಗೆ ತೆರಳುತ್ತಿದ್ದ ಮುಸ್ಲಿಂ ಸಮುದಾಯದ ಮಹಿಳೆಯರು ಉಪಚರಿಸಿದ್ದಲ್ಲದೆ, ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಇಲಾಖೆ ತಕ್ಷಣ ಸ್ಪಂದಿಸಿ ಬಿ.ಸಿ.ರೋಡಿನ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ, ಸ್ಥಳೀಯ ಆಸ್ಪತ್ರೆಯ ವೈದ್ಯರ ತಂಡವನ್ನು ಕರೆಸಿಕೊಂಡು ರೈಲು ಬೋಗಿಯೊಳಗೆ ಹೆರಿಗೆಗಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದಲ್ಲದೆ, ವೈದ್ಯರ ತಂಡ ಯಶಸ್ವಿಯಾಗಿ ಹೆರಿಗೆಯನ್ನು ಮಾಡಿಸಿದೆ.
ಕೂಡಲೇ ಆಂಬ್ಯಲೆನ್ಸ್ ಮೂಲಕ ಮಗು ಹಾಗೂ ತಾಯಿಯನ್ನು ವೈದ್ಯರ ತಂಡ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದ್ದಾರೆ. ತಾಯಿ-ಮಗು ಸುರಕ್ಷಿತವಾಗಿದ್ದು, ಇಬ್ಬರಿಗೂ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.








