

ಮಂಗಳೂರು, ಮೇ 7: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾರಿಯಾಗಿದ್ದ ನಾನ್-ಬೈಲಬಲ್ ವಾರಂಟ್‌ಗಳನ್ನು (NBW) ತಪ್ಪಿಸಿಕೊಂಡು 2018ರಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.



ಬಂಧಿತನನ್ನು ಅಬೂಬಕ್ಕರ್ ಸಿದ್ದೀಕ್ @ ಕಾಪ್ರಿ ಸಿದ್ದೀಕ್ (ತಂದೆ: ಅಬ್ದುಲ್ಲಾ), ಪಾವಲಿಕೆ, ಉಪ್ಪಳ, ಕಾಸರಗೋಡು ಜಿಲ್ಲೆ ನಿವಾಸಿ ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಮಂಗಳೂರು ನಗರದ ಉಳ್ಳಾಲ, ಕೊಣಾಜೆ ಹಾಗೂ ಕಂಕನಾಡಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು ಮೂರು NBW ವಾರಂಟ್‌ಗಳು ಬಾಕಿ ಇದ್ದವು.

ಆರೋಪಿಯ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 74/2017ರಲ್ಲಿ ಐಪಿಸಿ ಕಲಂ 380 ಮತ್ತು 411ರಡಿ, ಕೊಣಾಜೆ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 68/2018 ಹಾಗೂ ಕಂಕನಾಡಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 149/2017ರಲ್ಲಿ ಐಪಿಸಿ ಕಲಂ 379, 411 ಜೊತೆಗೆ ಗೋಹತ್ಯೆ ನಿಷೇಧ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣಗಳು ದಾಖಲಾಗಿದ್ದವು.ಈ ಪ್ರಕರಣಗಳಲ್ಲಿ ಸುಮಾರು ಎಂಟು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಆರೋಪಿ ತಲೆಮರೆಸಿಕೊಂಡಿದ್ದನು ಎನ್ನಲಾಗಿದೆ.ನಗರದಲ್ಲಿ ತಲೆಮರೆಸಿಕೊಂಡಿರುವ ವಾರಂಟು ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ತಂಡ ಆರೋಪಿಯ ಚಲನವಲನಗಳ ಕುರಿತು ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿತು. PSI ಸಿದ್ದಪ್ಪ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.








