





ಲಕ್ನೋ: ರೈಲು ಬೋಗಿಯನ್ನು ಸ್ವಚ್ಛಗೊಳಿಸಲು ಹೋದ ಸಿಬ್ಬಂದಿ ಶಿರಚ್ಛೇದಿತ ದೇಹ ಪತ್ತೆ, ಮುಂಡ ಕತ್ತರಿಸಿದ ರುಂಡವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಛಪ್ರಾದಿಂದ ಲಕ್ನೋಗೆ ಪ್ರಯಾಣಿಸುತ್ತಿದ್ದ ಗೋಮ್ತಿನಗರ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಈ ಘಟನೆ ನಡೆದಿದೆ.
ರೈಲಿನ ಸ್ವಚ್ಛತಾ ಸಿಬ್ಬಂದಿ ಎಸಿ ಸ್ಲೀಪರ್ ಕೋಚ್ ಬೋಗಿಯನ್ನು ಸ್ವಚ್ಛಗೊಳಿಸುತ್ತಿರುವಾಗ ಅನುಮಾಸ್ಪದವಾಗಿ ಚೀಲ ಮತ್ತು ಒಂದು ಬಾಕ್ಸ್ ಕಂಡು ಬಂದಿದೆ. ಅನುಮಾನಗೊಂಡ ಸಿಬ್ಬಂದಿ ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಚೀಲದಲ್ಲಿ ಏನಿದೆ ಎಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶಿರಚ್ಛೇದಿತ ದೇಹ ಹಾಗೂ ಇತರೆ ಭಾಗಗಳನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿಟ್ಟಿರುವುದು ಕಂಡುಬಂದಿದೆ.
ಅಪರಿಚಿತ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಚೆಕ್ ಮಾಡುತ್ತಿದ್ದಾರೆ. ಪ್ರಯಾಣಿಕರ ಚಲನವಲನಗಳನ್ನು ಮತ್ತು ನೆರೆಯ ಜಿಲ್ಲೆಗಳು ಮತ್ತು ರಾಜ್ಯಗಳಿಂದ ಕಾಣೆಯಾದ ವ್ಯಕ್ತಿಗಳ ವರದಿಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.
ರೈಲ್ವೆ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದು, ಭಾನುವಾರ (ಮೇ 17) ಗೋಮ್ತಿನಗರ ಎಕ್ಸ್ಪ್ರೆಸ್ ರೈಲು ಸಂಖ್ಯೆ 15114 ರ ಎನ್‌ಇಆರ್ ಎಸ್ 1 ಕೋಚ್ ನಂ. 217570 ರಲ್ಲಿ ಒಂದು ಬ್ಯಾಗ್ ಮತ್ತು ಬಾಕ್ಸ್ ಪತ್ತೆಯಾಗಿದೆ. ರೈಲ್ವೆ ರಕ್ಷಣಾ ಅಧಿಕಾರಿಗಳು ಮತ್ತು ರೈಲ್ವೆ ಪೊಲೀಸ್ ತಂಡಗಳು ಪರೀಶಿಲನೆ ನಡೆಸಿದಾಗ ತುಂಡುತುಂಡಾಗಿ ಕತ್ತರಿಸಿದ ಶವ ಸಿಕ್ಕಿದೆ. ಮಹಿಳೆಯ ವಯಸ್ಸು 30 ರಿಂದ 35 ಇರಬಹುದೆಂದು ಅಂದಾಜಿಸಲಾಗಿದೆ. ಅಪರಿಚಿತ ಮೃತ ಮಹಿಳೆಯನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮಹಿಳೆಯ ಗುರುತನ್ನು ಪತ್ತೆಹಚ್ಚಲು ತಂಡವನ್ನು ರಚಿಸಲಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ








