




ವಿಜಯಪುರ: ಆಸ್ತಿ ವಿವಾದದ ಹಿನ್ನೆಲೆ ಒಂದೇ ಕುಟುಂಬದ ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹಾಗೂ ಗುಂಡು ಹಾರಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಈ ಭೀಕರ ಕೊಲೆ ನಡೆದಿದೆ.
ನಿರಾಳೆ ಹಾಗೂ ಗೊಳಗಿ ಕುಟುಂಬಗಳ ನಡುವೆ ಜಮೀನು ವ್ಯಾಜ್ಯವಿದ್ದ ಕಾರಣಕ್ಕೆ ಈ ಹತ್ಯೆ ನಡೆದಿದೆ ಎನ್ನಲಾಗಿದೆ.
ಚಡಚಣ ಪಟ್ಟಣದ ಒಂದೇ ಕುಟುಂಬಕ್ಕೆ ಸೇರಿದ ದುಂಡಪ್ಪ ನಿರಾಳೆ(65), ಶಿವಪುತ್ರ ನಿರಾಳೆ(58), ಚಂದ್ರಕಾಂತ ನಿರಾಳೆ(55), ರಾಹುಲ್ ನಿರಾಳೆ(25), ಸಮರ್ಥ ನಿರಾಳೆ(23) ಮತ್ತು ಇವರ ಜತೆಗಿದ್ದ ಶಬ್ಬಿರ್ ಅತ್ತಾರ(45) ಕೊಲೆಯಾದ ದುರ್ದೈವಿಗಳು. ಅರವಿಂದ ಕಟಗಿ(72) ಮತ್ತು ಸಂದೀಪ ಮಾನೆ(23) ಗಾಯಗೊಂಡವರಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕೊಲೆಯಾದವರಲ್ಲಿ ಐವರು ಒಂದೇ ಕುಂಟುಂದವರು ಸೇರಿದ್ದಾರೆ. ಮತ್ತೋರ್ವ ಇವರ ಕುಂಟುಂಬದ ಆಪ್ತ ಎಂದು ತಿಳಿದು ಬಂದಿದೆ. ಗೋವಿಂದಪುರ ಗ್ರಾಮದ ಜಮೀನಲ್ಲಿ ಈ ಹತ್ಯಾಕಾಂಡ ನಡೆದಿದೆ.
ಮೊದಲು ಗುಂಡು ಹಾರಿಸಿ ನಂತರ ಮಾರಾಕಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಅಪ್ಪುಗೌಡಾ ಎಂಬವರಿಂದ ಈ ಹತ್ಯೆ ನಡೆದಿರುವ ಶಂಕೆ ವ್ಯಕ್ತ ವಾಗಿದ್ದು, ಸ್ಥಳಕ್ಕೆ ಚಡಚಣ ಪೊಲೀಸರು ಹಾಗೂ ಎಸ್‌ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.








