ಸಹಾಯದ ನೆಪದಲ್ಲಿ ಬಂದವಳಿಂದಲೇ ಮನೆಗೆ ಕನ್ನ







ಮುಂಬೈ: ಬಾಲಿವುಡ್ ನಟಿ ರವೀನಾ ಟಂಡನ್ ಅವರ ತಾಯಿಗೆ ಸೇರಿದ ಸುಮಾರು 25 ಲಕ್ಷ ರೂ. ಮೌಲ್ಯದ ಚಿನ್ನ, ವಜ್ರಾಭರಣ ಹಾಗೂ ದುಬಾರಿ ಕೈಗಡಿಯಾರಗಳನ್ನು ಕಳವು ಮಾಡಿರುವ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ಜುಹು ಪೊಲೀಸರು ಪ್ರಕರಣ ಸಂಬಂಧ 47 ವರ್ಷದ ರಾಶಿ ಛಾಬ್ರಿಯಾ ಎಂಬಾಕೆಯನ್ನು ಬಂಧಿಸಿದ್ದಾರೆ. ಆರೋಪಿ ಕಳೆದ 2020ರಿಂದ ಟಂಡನ್ ಕುಟುಂಬದ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದಳು ಎಂದು ತಿಳಿದುಬಂದಿದೆ.
ರವೀನಾ ಟಂಡನ್ ಅವರ ತಾಯಿಗೆ ಸಹಾಯ ಮಾಡುವ ನೆಪದಲ್ಲಿ ಆರೋಪಿ ಕುಟುಂಬದ ವಿಶ್ವಾಸ ಗಳಿಸಿದ್ದಳು. ಬಳಿಕ ಮನೆಯ ಲಾಕರ್ ಒಡೆದು ಚಿನ್ನ ಮತ್ತು ವಜ್ರಾಭರಣಗಳ ಜೊತೆಗೆ ಎರಡು ದುಬಾರಿ ಕೈಗಡಿಯಾರಗಳನ್ನು ಕಳವು ಮಾಡಿದ್ದಾಳೆ.ಲಾಕರ್‌ನಲ್ಲಿದ್ದ ಬೆಲೆಬಾಳುವ ವಸ್ತುಗಳು ಕಾಣೆಯಾಗಿರುವುದು ಕುಟುಂಬದ ಗಮನಕ್ಕೆ ಬಂದಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಳು. ಆದರೆ ಅನುಮಾನ ಹೆಚ್ಚಾದ ಹಿನ್ನೆಲೆ ಕುಟುಂಬ ಜುಹು ಪೊಲೀಸ್ ಠಾಣೆಗೆ ದೂರು ನೀಡಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಆರೋಪಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯಿಂದ ಕಳುವಾಗಿದ್ದ ಕೆಲವು ದುಬಾರಿ ಕೈಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಆಭರಣಗಳನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ








