ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪಿಎಂ







ನವದೆಹಲಿ: ದಕ್ಷಿಣ ದೆಹಲಿಯ ಮಾಳ್ವಿಯಾ ನಗರದಲ್ಲಿರುವ ರೆಸ್ಟೋರೆಂಟ್‌ವೊಂದರಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಪರಿಣಾಮ ವಿದೇಶಿಯರು ಸೇರಿ 21 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದು (ಜೂ.3) ಬೆಳಿಗ್ಗೆ8:50ರ ಸುಮಾರಿಗೆ ರೆಸ್ಟೋರೆಂಟ್‌ನ ಆರು ಅಂತಸ್ತಿನ ಕಟ್ಟಡದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಆರಂಭದಲ್ಲಿ ನೆಲ ಮಾಳಿಗೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೇರೆ ಮಾಳಿಗೆಗೂ ಹರಡಿಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೂಡಲೇ ಅಲ್ಲಿದ್ದವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಬೆಂಕಿ ಅವಘಡದಲ್ಲಿ 21 ಮಂದಿ ಸಾವನ್ನಪ್ಪಿದ್ದು, ಈ ಪೈಕಿ ಕೆಲವರು ವಿದೇಶಿಯರಾಗಿದ್ದು, ಮಧ್ಯ ಏಷ್ಯಾ ಮತ್ತು ಆಫ್ರಿಕಾದವರು ಎನ್ನಲಾಗಿದೆ. ಜೊತೆಗೆ 37 ಜನರನ್ನು ಈಗಾಗಲೇ ರಕ್ಷಿಸಲಾಗಿದೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಮೃತ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಗಾಯಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಈ ಕುರಿತು ಪಿಎಂ ಕಚೇರಿ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ದೆಹಲಿಯ ಮಾಳವೀಯ ನಗರದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟಿರುವುದು ದುರಂತದ ಸಂಗತಿ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ಮತ್ತು ಚಿಕಿತ್ಸೆಯನ್ನು ಒದಗಿಸಲು ಅಧಿಕಾರಿಗಳು ಸ್ಥಳದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸದ್ಯ ಸ್ಥಳದಲ್ಲಿ ಹತ್ತು ಅಗ್ನಿಶಾಮಕ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.








