

ವಿಟ್ಲ: ಪುತ್ತೂರು ವಿಧಾನಸಭಾ ಕ್ಷೇತ್ರದ ಕಡೂರು-ಕಾಂಞಂಗಾಡ್ ರಾಜ್ಯ ಹೆದ್ದಾರಿಯ ವಿಟ್ಲ ಸಮೀಪದ ಬೊಬ್ಬೆಕೇರಿ ಎಂಬಲ್ಲಿ ರಸ್ತೆ ಪುನರ್ ನಿರ್ಮಾಣ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಜೂನ್ 5 ರಿಂದ ಮುಂದಿನ 3 ತಿಂಗಳ ಅವಧಿಗೆ ಸದರಿ ರಸ್ತೆಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳಾದ ದರ್ಶನ್ ಎಚ್.ವಿ. ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಬಂಟ್ವಾಳ ಉಪವಿಭಾಗದ ಮನವಿ ಹಾಗೂ ಮಂಗಳೂರು ಉಪವಿಭಾಗಾಧಿಕಾರಿಗಳ ವರದಿ ಆಧಾರಿಸಿ ಈ ಕೆಳಗಿನಂತೆ ಬದಲಿ ಮಾರ್ಗಗಳನ್ನು ನಿಗದಿಪಡಿಸಲಾಗಿದೆ.
ಬದಲಿ ಸಂಚಾರ ಮಾರ್ಗಗಳ ವಿವರ:
- ಸಾರಡ್ಕ, ವಿಟ್ಲ ಕಡೆಯಿಂದ ಮಂಗಳಪದವು ಕಲ್ಲಡ್ಕ ಕಡೆಗೆ ಸಂಚರಿಸುವ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು(ಬಸ್ಸುಗಳು ಸೇರಿ) ಮಾತ್ರವೇ ವಿಟ್ಲ ನಾಲ್ಕು ಮಾರ್ಗದ ಬಳಿ ಇರುವ ಬದ್ರಿಯಾ ಟೆಕ್ಸ್ ಟೈಲ್ ಬಳಿ ರಸ್ತೆಯಿಂದ ಅನಂತೇಶ್ವರ, ಪಂಚಲಿಂಗೇಶ್ವರ, ಅಯ್ಯಪ್ಪ ದೇವಸ್ಥಾನ, ಸುರಕ್ಷಾ ಆಸ್ಪತ್ರೆಯ ಮೂಲಕ ಬೊಬ್ಬೆಕೇರಿಗೆ ಸಂಚರಿಸಿ ಮುಂದೆ ಸಾಗಬೇಕು.
- ಕಲ್ಲಡ್ಕ ಕಡೆಯಿಂದ ವಿಟ್ಲಕ್ಕೆ ಆಗಮಿಸುವ ಎಲ್ಲಾ ವಾಹನಗಳಿಗೆ ಪ್ರಸ್ತುತ ಇರುವ ಹಳೆಯ ರಸ್ತೆ ಮೂಲಕ ಏಕಮುಖ ಸಂಚಾರದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
- ನಾಲ್ಕು ಮಾರ್ಗ ಜಂಕ್ಷನ್ ನಿಂದ ದೇವಸ್ಥಾನ ರಸ್ತೆಯಾಗಿ ಬೊಬ್ಬೆಕೇರಿಗೆ ಹೋಗುವ ರಸ್ತೆಯ ಎರಡು ಬದಿಯಲ್ಲಿ ಹಾಗೂ
- ಬೊಬ್ಬೆಕೇರಿಯಿಂದ ನಾಲ್ಕು ಮಾರ್ಗ ಜಂಕ್ಷನ್ ಬರುವ ಹಳೆಯ ರಸ್ತೆಯ ಎರಡು ಬದಿಯಲ್ಲಿ ಪಾರ್ಕಿಂಗ್ ನಿಷೇಧಿಸುವುದು.
- ನಾಲ್ಕು ಮಾರ್ಗ ಜಂಕ್ಷನ್‌ನಿಂದ ದೇವಸ್ಥಾನ ರಸ್ತೆಯಾಗಿ ಬೊಬ್ಬೆಕೇರಿಗೆ ಹೋಗುವ ರಸ್ತೆಯಲ್ಲಿ ಭಾರಿ ಘನವಾಹನಗಳ ಸಂಚಾರವನ್ನು ನಿಷೇಧಿಸುವುದು ಹಾಗೂ ಭಾರಿ ಘನ (10 ಚಕ್ರದ) ವಾಹನಗಳು ಕಬಕ ರಸ್ತೆಯ ಮೂಲಕ ಸಂಚರಿಸಲು ಸೂಚಿಸಲಾಗಿದೆ.
ಬದಲಿ ರಸ್ತೆ ಮಾರ್ಗಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲು ಹಾಗೂ ಸಂಚಾರ ನಿಯಂತ್ರಣಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಈ ತಾತ್ಕಾಲಿಕ ಬದಲಾವಣೆಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.







