




ಚೆನ್ನೈ: ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ಇಂದು (ಜೂ.10) ವಿಧಿವಶರಾಗಿದ್ದಾರೆ.
ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತಿರಾಜ ಅವರು ಇಂದು ತಮ್ಮ 84ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ದಶಕಗಳ ಕಾಲ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮ ವಿಶಿಷ್ಟ ಕಥಾಹಂದರ ಹಾಗೂ ಗ್ರಾಮೀಣ ಸೊಗಡಿನ ಚಿತ್ರಗಳ ಮೂಲಕ ದಕ್ಷಿಣ ಭಾರತದ ಸಿನಿಮಾ ರಂಗಕ್ಕೆ ವಿಭಿನ್ನ ರೂಪವನ್ನು ನೀಡಿದ್ದರು. ತಮ್ಮ ಸುದೀರ್ಘ ಮತ್ತು ಅದ್ಭುತ ಸಿನಿ ಪಯಣದಲ್ಲಿ ಭಾರತಿರಾಜ ಅವರು ಕೇವಲ ನಿರ್ದೇಶನ ಮಾತ್ರವಲ್ಲದೆ, ಕಥೆಗಾರರಾಗಿ ಮತ್ತು ನಟರಾಗಿಯೂ ಗುರುತಿಸಿಕೊಂಡಿದ್ದರು.

ತಮಿಳುನಾಡಿನ ತೇಣಿ ಜಿಲ್ಲೆಯ ಒಂದು ಸಾಮಾನ್ಯ ಗ್ರಾಮೀಣ ಕುಟುಂಬದಲ್ಲಿ ಜನಿಸಿದ ಅವರು ಚಿತ್ರರಂಗಕ್ಕೆ ಬರುವ ಮುನ್ನ ಹೆಲ್ತ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಸಿನಿಮಾ ಮೇಲಿನ ಅತಿಯಾದ ಆಸಕ್ತಿಯಿಂದಾಗಿ ನಂತರ ಚೆನ್ನೈಗೆ ವಲಸೆ ಬಂದು, ಕನ್ನಡದ ಖ್ಯಾತ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಅವರ ಬಳಿ ಸಹ-ನಿರ್ದೇಶಕರಾಗಿ ಕೆಲಸ ಕರಗತ ಮಾಡಿಕೊಂಡಿದ್ದರು.
1977ರಲ್ಲಿ 16 ವಯತಿನಿಲೆ ಸಿನಿಮಾ ಮೂಲಕ ನಿರ್ದೇಶಕರಾಗಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕಲ್ಲುಕ್ಕುಲ್ ಈರಮ್, ಕಿಝಕ್ಕೆ ಪೋಗುಮ್ ರೈಲ್, ಸಿಗಪ್ಪು ರೋಜಕ್ಕಲ್, ನಿಝಲ್ಗಲ್ ಇವರ ಸಿನಿಮಾಗಳು. ಭಾರತಿರಾಜ ಅವರ ಸಾಧನೆಗಾಗಿ ‘ಅತ್ಯುತ್ತಮ ಚಿತ್ರ’ ಹಾಗೂ ‘ಅತ್ಯುತ್ತಮ ಚಿತ್ರಕಥೆ’ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.








