
ಚಿಕ್ಕಮಗಳೂರು, ಜೂ.22: ಅಪ್ರಾಪ್ತ ವಯಸ್ಸಿನ ಮಕ್ಕಳ ಆಕ್ಷೇಪಾರ್ಹ ಹಾಗೂ ಲೈಂಗಿಕ ದೃಶ್ಯಗಳನ್ನು ಒಳಗೊಂಡ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಚಿಕ್ಕಮಗಳೂರು ನಗರದ ಮಹಿಳೆಯೊಬ್ಬರ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





ರಾಷ್ಟ್ರೀಯ ನಾಪತ್ತೆಯಾದ ಮತ್ತು ಶೋಷಣೆಗೆ ಒಳಗಾದ ಮಕ್ಕಳ ಕೇಂದ್ರ (NCMEC) ನೀಡಿದ ವರದಿಯ ಆಧಾರದಲ್ಲಿ ಸೈಬರ್ ಕ್ರೈಂ ಠಾಣೆಯ ಅಧಿಕಾರಿಗಳು ಎನ್ಸಿಆರ್ಪಿ ಪೋರ್ಟಲ್ ಪರಿಶೀಲನೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ತಾಂತ್ರಿಕ ಮಾಹಿತಿ ಸಂಗ್ರಹಿಸಿದಾಗ, ಚಿಕ್ಕಮಗಳೂರು ನಗರದ ಬಾರ್ಲೈನ್ ರಸ್ತೆಯ ನಿವಾಸಿ ಮಹಿಳೆಯೊಬ್ಬರು ತಮ್ಮ ಇನ್ಸ್ಟಾಗ್ರಾಮ್ ಮೆಸೆಂಜರ್ ಮೂಲಕ ಅಪ್ರಾಪ್ತ ಮಕ್ಕಳ ನಗ್ನ ಹಾಗೂ ಲೈಂಗಿಕ ಕ್ರಿಯೆಯ ಸುಮಾರು 20 ಸೆಕೆಂಡುಗಳ ವಿಡಿಯೊವನ್ನು ಹಂಚಿಕೊಂಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಮಹಿಳೆಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೇರಿದಂತೆ ಸಂಬಂಧಿತ ಕಾನೂನುಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








