Monday, June 22, 2026
spot_imgspot_img
spot_imgspot_img

ಬಂಗಾಳದಲ್ಲಿ ಬಳಸಿದ ಸಾಫ್ಟ್ ವೇರ್ ರಾಜ್ಯದಲ್ಲಿ ಬಳಕೆ ಮಾಡಬೇಡಿ’: SIR ವಿರೋಧಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಸಾಹಿತಿಗಳಿಂದ ಪತ್ರ

- Advertisement -
- Advertisement -

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ವಿರೋಧಿಸಿ ನಡೆಯಲಿರುವ ಎಲ್ಲ ಶಾಂತಿಯುತ, ನ್ಯಾಯಬದ್ಧ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಿ ಮತ್ತು ಪಶ್ಚಿಮ ಬಂಗಾಳದಲ್ಲಿ ಬಳಸಿದ ತಾರ್ಕಿಕ ವ್ಯತ್ಯಾಸ ಸಾಫ್ಟ್ ವೇ‌ರ್ ಅನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಳಸಬಾರದು ಎಂದು ಆಗ್ರಹಿಸಿ ಸಾಹಿತಿ-ಕಲಾವಿದರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಪತ್ರ ಬರೆದಿದ್ದಾರೆ.

ಸೋಮವಾರ ಸಿಎಂಗೆ ಬರೆದಿರುವ ಸಾಹಿತಿ, ಕಲಾವಿದರ ಪತ್ರವನ್ನು ಬಿಡುಗಡೆ ಮಾಡಿರುವ ಲೇಖಕ ರಘುನಂದನ್, ‘ಡಾ.ಅಂಬೇಡ್ಕ‌ರ್ ಸಂವಿಧಾನವನ್ನು ದೇಶಕ್ಕೆ ಅರ್ಪಿಸುವ ವೇಳೆ ಸಮಾನ ಮತದಾನದ ಹಕ್ಕನ್ನು ನಾವು ಪಡೆದು ಕೊಂಡಿರುವ ರಾಜಕೀಯ ಸ್ವಾತಂತ್ರ್ಯ ಎಂದು ಹೇಳಿದ್ದರು. ‘ಎಲ್ಲರಿಗೂ ಒಂದು ಮತ್ತೆ, ಒಂದು ಮತ ಒಂದು ಮೌಲ್ಯ ಎನ್ನುವುದನ್ನು ಇಲ್ಲಿಯವರೆಗೂ ಚುನಾವಣಾ ಆಯೋಗ ಪಾಲಿಸಿ ಕೊಂಡು ಬಂದಿದ್ದವು. ಆದರೆ ಈಗ ಭಾರತ ಚುನಾವಣಾ ಆಯೋಗದ ಮೂಲಕ ಜಾರಿ ಮಾಡಲಾಗುತ್ತಿರುವ ಎಸ್‌ಐಆ‌ರ್ ಪ್ರಕ್ರಿಯೆಯು ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿ, ಎಲ್ಲ ಜಾತಿಯ ಬಡವರು ದೊಡ್ಡಸಂಖ್ಯೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ’ ಎಂದು ದೂರಿದ್ದಾರೆ.

ಇಲ್ಲಿಯವರೆಗೂ ಇಲ್ಲದ ಹೊಸ ದಾಖಲೆಗಳ ಕಾರಣ ನೀಡಿ ಅರ್ಹ ಪ್ರಜೆಗಳ ಮತದಾನದ ಹಕ್ಕನ್ನು ಅವರ ಜೀವಿತ ಕಾಲದಲ್ಲಿಯೇ ನಿರಾಕರಿಸುತ್ತಿರುವುದು ಪ್ರಜಾತಂತ್ರದ ಕಗ್ಗೋಲೆಯಾಗಿದೆ. ಅಷ್ಟೇ ಅಲ್ಲದೇ ಈ ಹಿಂದೆ ಬಿಜೆಪಿ ಸರಕಾರ ಪ್ರಯತ್ನಿಸಿ ವಿಫಲಗೊಂಡ ಸಿಎಎ, ಎನ್‌ಆಕ್ಸಿ ಯನ್ನು ಜಾರಿಗೊಳಿಸುವ ಪೌರತ್ವ ಪರೀಕ್ಷೆಯ ಪರೋಕ್ಷ ಕಾರ್ಯಚರಣೆಯಂತಾಗಿದೆ. ಈಗಾಗಲೇ ಎಸ್‌ಐಆ‌ರ್ ನಿಂದಾಗಿ 5.18 ಕೋಟಿಗೂ ಹೆಚ್ಚು ಅರ್ಹ ಮತದಾರರನ್ನು ಮತಪಟ್ಟಿಯಿಂದ ಹೊರಗಿಡಲಾಗಿದೆ’ ಎಂದು ರಘುನಂದನ್ ತಿಳಿಸಿದ್ದಾರೆ.’

ನುಸುಳುಕೋರರನ್ನು ಪತ್ತೆ ಹಚ್ಚುವುದರ ಬದಲಿಗೆ ದೊಡ್ಡ ಸಂಖ್ಯೆಯಲ್ಲಿ ಪೌರತ್ವದ ಹಕ್ಕು ಇಲ್ಲದ ಎರಡನೇ ದರ್ಜೆಯ ಜನ ವರ್ಗವನ್ನು ಸೃಷ್ಟಿಸುವ ಅಜೆಂಡಾ ಆಗಿದೆಯೇ ಎನ್ನುವ ಆತಂಕ ನಮ್ಮನ್ನು ಕಾಡುತ್ತಿದೆ. ಚುನಾವಣಾ ಆಯೋಗವು ಕರಡು ಪಟ್ಟಿ ತಯಾರಾದ ನಂತರ ಗ್ರಾಮ ಸಭೆಗಳನ್ನು ಕರೆದು ಸಾರ್ವಜನಿಕ ಪರಿಶೀಲನೆ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಬೇಕು. ಮತದಾರರ ಪಟ್ಟಿಯನ್ನು ಮೆಷಿನ್ ರೀಡಬಲ್ ಫಾಮ್ಯಾಟ್ ಮೂಲಕ ಪಾರದರ್ಶಕತೆ ಪಾಲಿಸಬೇಕು. ಮನವಿ, ಆಕ್ಷೇಪಣೆ ಸಲ್ಲಿಸಲು-ಅಗತ್ಯ ದಾಖಲೆ ಒದಗಿಸಲು ಕನಿಷ್ಠ ಆರು ತಿಂಗಳ ಸಮಯವಕಾಶ ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.’ರಾಜ್ಯ ಸರಕಾರ ಸ್ಥಳೀಯ ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ಮಾಸ್ಟರ್ ರೋಲಿನ ಸುಧಾರಣೆಯನ್ನು ಪರಿಣಾಮಕಾರಿಯಾಗಿ ಮಾಡಿಸಲು ವಿಶೇಷ ಗಮನ ನೀಡಬೇಕು.

ಚುನಾವಣಾ ಆಯೋಗದ ಮ್ಯಾನ್ಯುಯಲ್‌ನಲ್ಲಿ ಇರುವಂತೆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಮುನ್ನ ಗ್ರಾಮ ಸಭೆಗಳನ್ನು ಹಾಗೂ ವಾರ್ಡ್‌ ಸಭೆಗಳನ್ನು ಕರೆದು ತಿದ್ದುಪಡಿಗಳನ್ನು ಸ್ವೀಕರಿಸಿ, ಸಾರ್ವಜನಿಕವಾಗಿ ಪರಿಶೀಲಿಸಿ, ಅಗತ್ಯ ತಿದ್ದುಪಡಿ ಮಾಡಿಯೇ ಅಂತಿಮಗೊಳಿಸಬೇಕು. ಗ್ರಾಮ/ವಾರ್ಡ್ ಸಭೆಗಳನ್ನು ಆಯೋಗ ರೂಪಿಸಿರುವ ಸಾಮಾಜಿಕ ಪರಿಶೀಲನೆಯ ಮಾನದಂಡಗಳನ್ನು ಅನ್ವಯಿಸಿ ನಡೆಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.’ಆ ಮೂಲಕ ರಾಜ್ಯ ಚುನಾವಣಾ ಆಯೋಗದ ಪಟ್ಟಿಗೆ ಹೆಚ್ಚಿನ ಖಚಿತತೆ ಹಾಗೂ ಮಾನ್ಯತೆ ಬರುವಂತೆ ನೋಡಿಕೊಳ್ಳಬೇಕು.

ಸಾರಾಂಶದಲ್ಲಿ ರಾಜ್ಯದ ಯಾವ ಅರ್ಹ ಮತದಾರರು ಹೊರಗೆ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸರಕಾರ ಹೊರಬೇಕು’ ಎಂದು ರಘುನಂದನ್ ಹೇಳಿದ್ದಾರೆ.ಪತ್ರದಲ್ಲಿ ಸಾಹಿತಿ-ಕಲಾವಿದರಾದ ನಾಗೇಶ ಹೆಗಡೆ, ಚಂದ್ರಶೇಖರ ತಾಳ್ಯ ಡಾ.ರಾಜೇಂದ್ರ ಚೆನ್ನಿ, ವಿವೇಕ ಶಾನಭಾಗ್‌, ಪ್ರೊ.ಕೆ.ಫಣಿರಾಜ್, ಡಾ.ಅರುಣ್‌ಜೋಳದ ಕೂಡ್ಲಿಗಿ, ನಾ. ದಿವಾಕರ, ಒ.ಎಲ್.ನಾಗಭೂಷಣ ಸ್ವಾಮಿ, ಎನ್‌.ಕೆ.ಮೋಹನ್‌ರಾಮ್, ಜಿ.ಪಿ.ಬಸವರಾಜು, ಎನ್.ಮನುಚಕ್ರವರ್ತಿ ಸೇರಿದಂತೆ 50 ಜನರು ಪತ್ರಕ್ಕೆ ಸಹಿ ಹಾಕಿದ್ದಾರೆ.

- Advertisement -

Related news

error: Content is protected !!