




ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಪಿಲಿಕುಡೇಲು ಎಂಬಲ್ಲಿ ಪರಿಶಿಷ್ಟ ಪಂಗಡದ ಕುಟುಂಬದ ಮನೆಗೆ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ ಒಡ್ಡಿ, ಸೊತ್ತುಗಳಿಗೆ ಹಾನಿ ಮಾಡಿ ಮಹಿಳೆ ಹಾಗೂ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಹಿರೇಬಂಡಾಡಿ ಹರಿನಗರದ ಚೂವಿಶಾಂತ ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೇ ಪ್ರಕರಣದ ಇತರ ಆರೋಪಿಗಳಾದ ಚೂವಿಶಾಂತನ ತಂದೆ ವಿಶ್ವನಾಥ, ತಾಯಿ ಕುಶಲತಾ ಮತ್ತು ತಾಯಿಯ ತಂಗಿ ಪಾರ್ವತಿ ಅವರಿಗೆ ಮಂಗಳೂರು ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ದೂರಿನ ವಿವರ:
ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಪಿಲಿಕುಡೇಲು ಎಂಬಲ್ಲಿಯ 49ರ ಹರೆಯದ ಮಹಿಳೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರುದಾರ ಮಹಿಳೆಯ ಕೊನೆಯ ಮಗಳ ಸಹಪಾಠಿಯಾಗಿರುವ ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿಯ ಹರಿನಗರದ ಚೂವಿಶಾಂತ ಎಂಬಾತ ಪಿಲಿಕುಡೇಲು ಎಂಬಲ್ಲಿರುವ ಮಹಿಳೆಯ ಮನೆಗೆ ಏಕಾಏಕಿಯಾಗಿ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮಹಿಳೆಯ ಮಗಳನ್ನು ಉದ್ದೇಶಿಸಿ ಹೊರಗೆ ಬಾ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನನ್ನನ್ನು ಮದುವೆ ಆಗಲು ನಿರಾಕರಿಸುತ್ತೀಯಾ ನಿನಗೆಷ್ಟು ಅಹಂಕಾರ ಇರಬೇಕು. ನನ್ನನ್ನು ಮದುವೆಯಾಗದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾನೆ. ಮನೆಯ ಹೊರಗೆ ನಿಲ್ಲಿಸಿದ್ದ ಸ್ಕೂಟರ್ಗೆ ಕಾಲಿನಿಂದ ಒದ್ದು ಮಗುಚಿ ಹಾಕಿ ದೊಣ್ಣೆಯಿಂದ ಹೊಡೆದು ಪುಡಿಪುಡಿ ಮಾಡಿದ್ದಾನೆ. ಅಲ್ಲದೆ ಮನೆಯ ಬಾಗಿಲನ್ನು ಒದ್ದು ಒಡೆದು ಮನೆಯೊಳಗೆ ಬಲತ್ಕಾರವಾಗಿ ನುಗ್ಗಿ ಟಿ.ವಿ.ಯನ್ನು ಹಾಗೂ ವಿದ್ಯುತ್ ಸ್ವಿಚ್ ಬೋರ್ಡ್ನ್ನು ಮತ್ತು ಮನೆಯ ಹಿಂಬದಿಯ ಹಾಗೂ ಮುಂದಿನ ಸಿಮೆಂಟ್ ಶೀಟ್ಗಳನ್ನು ಪುಡಿ ಮಾಡಿದ್ದಾನೆ. ತಡೆಯಲು ಹೋದ ಮಹಿಳೆಯನ್ನು ತಬ್ಬಿ ಹಿಡಿದುಕೊಂಡು ಸೀರೆಯ ಸೆರಗನ್ನು ಎಳೆದು ಮಾನಭಂಗ ಮಾಡಲು ಪ್ರಯತ್ನಿಸಿದ್ದಾನೆ. ತಡೆಯಲು ಬಂದ ಮಹಿಳೆಯ ಮಗಳನ್ನು ತಬ್ಬಿ ಎತ್ತಿಕೊಂಡು ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಮಾನಭಂಗ ಮಾಡಲು ಪ್ರಯತ್ನಿಸಿದ್ದಾನೆ. ಬಳಿಕ ಚೂವಿಶಾಂತ ಆತನ ತಂದೆಗೆ ಕರೆ ಮಾಡಿದ್ದಾನೆ. ನಂತರ ಚೂ ವಿಶಾಂತನ ತಂದೆ, ತಾಯಿ ಹಾಗೂ ತಾಯಿಯ ತಂಗಿ ಬಂದು ಚೂವಿಶಾಂತನನ್ನು ಕೋಣೆಯಿಂದ ಬಿಡಿ ಎಂದು ಹೇಳಿದ್ದಾರೆ. ಮನೆಯವರು ಪೋಲಿಸರು ಬರಲಿ ಎಂದು ಹೇಳಿದಾಗ ಚೂವಿಶಾಂತನ ತಂದೆ, ತಾಯಿ ಹಾಗೂ ತಾಯಿಯ ತಂಗಿ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಅಷ್ಟರಲ್ಲಿ ದೂರುದಾರ ಮಹಿಳೆಯ ಗಂಡ ಬರುವುದನ್ನು ನೋಡಿ ಮಹಿಳೆಯ ಮಗಳ ಚೂವಿಶಂತನು ನೀನು ನನ್ನ ಜೊತೆ ಬರಬೇಕು. ಇಲ್ಲದಿದ್ದಲ್ಲಿ ನಿನ್ನನ್ನು ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ನಂತರ ಮನೆಯಿಂದ ಸ್ವಲ್ಪ ದೂರ ಹೋಗಿ ಸಾರ್ವಜನಿಕ ದಾರಿಯಲ್ಲಿ ನಿಂತು ಜಾತಿ ನಿಂದನೆ ಮಾಡಿದ್ದಾನೆ. ಅಲ್ಲದೆ ನಿನ್ನ ಮಗಳ ತಲೆ ಕತ್ತರಿಸಿ ನಡುರಸ್ತೆಯಲ್ಲಿ ಹಾಕುತ್ತೇನೆ. ಮಗಳನ್ನು ಕಳಿಸು. ಇಲ್ಲದಿದ್ದಲ್ಲಿ ಮುಂದಕ್ಕೆ ನೋಡಿಕೊಳ್ಳುತ್ತೇನೆ ಎಂದು ಬೆದರಿಸಿದ್ದಾನೆ. ಚೂವಿಶಾಂತನ ಈ ಕೃತ್ಯದಿಂದ ರೂ. 90 ಸಾವಿರ ರೂ ಮೌಲ್ಯದ ಸ್ಕೂಟರ್, 25,000 ರೂ ಮೌಲ್ಯದ ಟಿ.ವಿ., 10 ಸಾವಿರ ರೂ ಮೌಲ್ಯದ ವಿದ್ಯುತ್ ಸ್ವಿಚ್ ಬೋರ್ಡ್, ಮತ್ತು 10 ಸಾವಿರ ರೂ ಮೌಲ್ಯದ ಸಿಮೆಂಟ್ ಶೀಟ್ ಹಾನಿಯಾಗಿದೆ. ಹಾನಿಯಾದ ವಸ್ತುಗಳ ಮೌಲ್ಯ ಸುಮಾರು 1,35,000 ರೂಪಾಯಿ ಆಗಬಹುದು ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 87/2026ರಂತೆ ಬಿಎನ್ಎಸ್ 329(4), 352, 351(3), 74, 3(5) ಮತ್ತು ಪರಿಶಿಷ್ಟ ಜಾತಿ/ಪಂಗಡಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ನಂತರ ಎಸ್.ಐ. ಕೌಶಿಕ್ ಬಿ.ಸಿ. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಚೂವಿಶಾಂತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಉಳಿದ ಆರೋಪಿಗಳಾದ ವಿಶ್ವನಾಥ, ಕುಶಲತಾ ಮತ್ತು ಪಾರ್ವತಿ ಅವರಿಗೆ ಮಂಗಳೂರು ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ನ್ಯಾಯವಾದಿಗಳಾದ ಪ್ರಸಾದ್ ಕುಮಾರ್ ರೈ ಉಪ್ಪಿನಂಗಡಿ, ಶ್ರೀಹರಿ ಪುತ್ತೂರು ಮತ್ತು ಕೃಷ್ಣದೇವ ಮಂಗಳೂರು ವಾದಿಸಿದ್ದರು.









