Wednesday, June 24, 2026
spot_imgspot_img
spot_imgspot_img

ಪೆರುವಾಯಿ ಜಂಕ್ಷನ್‌ನಲ್ಲಿ ನೂತನ ಸೇತುವೆ ನಿರ್ಮಾಣ ಮತ್ತು ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಸಾರ್ವಜನಿಕರ ಬೃಹತ್ ಪ್ರತಿಭಟನೆ

- Advertisement -
- Advertisement -

ವಿಟ್ಲ : ಪೆರುವಾಯಿ ಗ್ರಾಮದ ಜನರ ಜೀವಕ್ಕೆ ಸಂಚಕಾರ ತಂದೊಡ್ಡಿರುವ ಕಿರಿದಾದ ರಸ್ತೆ ಮತ್ತು ಹಳೆಯ ಸೇತುವೆಗಳ ಜಾಗದಲ್ಲಿ ಹೊಸ ಸೇತುವೆ ನಿರ್ಮಿಸುವಂತೆ ಹಾಗೂ ರಸ್ತೆಯನ್ನು ಪಿ.ಡಬ್ಲ್ಯೂ.ಡಿ (PWD) ಇಲಾಖೆಗೆ ಹಸ್ತಾಂತರಿಸುವಂತೆ ಆಗ್ರಹಿಸಿ ಜೂನ್ 22 ಪೆರುವಾಯಿ ಜಂಕ್ಷನ್‌ನಲ್ಲಿ ಸಾರ್ವಜನಿಕರು ಮತ್ತು ಪ್ರತಿಭಟನಾ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.ಪೆರುವಾಯಿ ಜಂಕ್ಷನ್‌ನಿಂದ ಕೇವಲ 500 ಮೀಟರ್ ದೂರದಲ್ಲಿರುವ ಪೇರಡ್ಕದ ಕರ್ನಾಟಕ-ಕೇರಳ ಸಂಪರ್ಕ ಸೇತುವೆ ಮತ್ತು 150 ಮೀಟರ್ ದೂರದಲ್ಲಿರುವ ಪೆರುವಾಯಿ-ಮಾಣಿಲ ರಸ್ತೆಯ ಸೇತುವೆಗಳು ಹಲವು ದಶಕಗಳಷ್ಟು ಹಳೆಯದಾಗಿವೆ. ಇವು ತೀರಾ ಕಿರಿದಾಗಿದ್ದು, ಪ್ರತಿದಿನ ನೂರಾರು ವಾಹನಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜೀವಭಯದಲ್ಲೇ ಸಂಚರಿಸುವ ಪರಿಸ್ಥಿತಿ ಇದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹತ್ತಕ್ಕೂ ಹೆಚ್ಚು ಅಪಘಾತಗಳು:

ವಿಶೇಷವಾಗಿ ಮಳೆಗಾಲದಲ್ಲಿ ಪೇರಡ್ಕ ಸೇತುವೆಯ ಮೇಲಿಂದ ನೀರು ಹರಿಯುತ್ತಿದ್ದು, ಸಂಚಾರ ಸಂಪೂರ್ಣ ಅಪಾಯಕಾರಿಯಾಗುತ್ತದೆ. ಸೇತುವೆಗೆ ಯಾವುದೇ ತಡೆಗೋಡೆ ಇಲ್ಲದ ಕಾರಣ ಕಳೆದ ಹತ್ತು ದಿನಗಳಲ್ಲೇ ಕೋಳಿ ಸಾಗಾಟದ ವಾಹನ ಮತ್ತು ಆಲ್ಟೋ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದಿವೆ. ಕಳೆದ ಕೆಲವು ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚು ವಾಹನಗಳು ಇಲ್ಲಿ ಅಪಘಾತಕ್ಕೀಡಾಗಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.ನಮ್ಮ ಪ್ರಮುಖ ಬೇಡಿಕೆಗಳು:ಪೆರುವಾಯಿ ಗ್ರಾಮದ ಪೇರಡ್ಕದಲ್ಲಿರುವ ಕರ್ನಾಟಕ-ಕೇರಳ ಸಂಪರ್ಕ ಸೇತುವೆಯ ಸ್ಥಳದಲ್ಲಿ ಅಪಾಯಕಾರಿ ತಿರುವುಗಳನ್ನು ತೆರವುಗೊಳಿಸಿ, ಸುಧಾರಿತ ರಸ್ತೆ ವಿನ್ಯಾಸದೊಂದಿಗೆ ವಿಶಾಲ ಹಾಗೂ ಸುರಕ್ಷಿತ ನೂತನ ಸೇತುವೆ ನಿರ್ಮಿಸಬೇಕು.ಪೆರುವಾಯಿ-ಮಾಣಿಲ ಸಂಪರ್ಕ ಸೇತುವೆಯು ಹಳೆಯದಾಗಿ ಹಾಗೂ ಕಿರಿದಾಗಿರುವುದರಿಂದ ಅದನ್ನು ತೆರವುಗೊಳಿಸಿ ಆಧುನಿಕ ವಿನ್ಯಾಸದೊಂದಿಗೆ ವಿಶಾಲ ಮತ್ತು ಸುರಕ್ಷಿತ ನೂತನ ಸೇತುವೆಯಾಗಿ ಪುನರ್ ನಿರ್ಮಿಸಬೇಕು.* ಪೆರುವಾಯಿಯಿಂದ ಬಾಳಶೆಟ್ಟಿ ಮೂಲೆ ಮೂಲಕ ಹಾದುಹೋಗುವ ಕನ್ಯಾನ ತನಕದ ರಸ್ತೆಯನ್ನು ಲೋಕೋಪಯೋಗಿ ಇಲಾಖೆ (PWD) ವ್ಯಾಪ್ತಿಗೆ ಹಸ್ತಾಂತರಿಸಿ ರಸ್ತೆ ಅಗಲೀಕರಣ ಹಾಗೂ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು.

ಓಣಿಬಾಗಿಲುವಿನಿಂದ ಪಕಳಕುಂಜ ತನಕ ಇನ್ನೂ ಅಗಲೀಕರಣವಾಗದೆ ಉಳಿದಿರುವ ರಸ್ತೆಯನ್ನು ತಕ್ಷಣ ಅಗಲೀಕರಿಸಿ ಅಭಿವೃದ್ಧಿಪಡಿಸಬೇಕು.ಹೊಸ ಸೇತುವೆ ನಿರ್ಮಾಣವಾಗುವವರೆಗೆ ಎರಡೂ ಸೇತುವೆಗಳಲ್ಲಿ ಅಗತ್ಯ ಸುರಕ್ಷ ತಾ ಕ್ರಮಗಳು, ಎಚ್ಚರಿಕೆ ಸೂಚನಾ ಫಲಕಗಳು, ಪ್ರತಿಫಲಕ, ಭದ್ರತಾ ತಡೆಗೋಡೆಗಳು ಹಾಗೂ ಇತರೆ ಸುರಕ್ಷತಾ ವ್ಯವಸ್ಥೆಗಳನ್ನು ತುರ್ತಾಗಿ ಅಳವಡಿಸಬೇಕು.ಮೇಲ್ಕಂಡ ಎಲ್ಲಾ ಕಾಮಗಾರಿಗಳಿಗೆ ಸ್ಪಷ್ಟ ಕಾರ್ಯಯೋಜನೆ ರೂಪಿಸಿ, ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವ ಬಗ್ಗೆ ಸಾರ್ವಜನಿಕರಿಗೆ ಭರವಸೆ ಮತ್ತು ಮಾಹಿತಿ ನೀಡಬೇಕು.ಸಾರ್ವಜನಿಕರ ಜೀವ ಮತ್ತು ಸುರಕ್ಷತೆಯ ವಿಚಾರದಲ್ಲಿ ಯಾವುದೇ ದುರಂತ ಸಂಭವಿಸುವ ಮೊದಲು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ. ಆದ್ದರಿಂದ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು.

ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಇಂದು ರಸ್ತೆಗಿಳಿದು ಪ್ರತಿಭಟನೆ ನಡೆಸಲಾಗುತ್ತಿದ್ದು, ಪ್ರತಿಭಟನೆಯ ತೀವ್ರತೆ ಅರಿತು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ಬಂಟ್ವಾಳ ವಿಭಾಗದ ಇಂಜಿನಿಯರ್ ತಾರಾನಾಥ್ ಮತ್ತು ಮಂಗಳೂರು ವಿಭಾಗದ ಇಂಜಿನಿಯರ್ ವೇಣುಗೋಪಾಲ್ ಅವರನ್ನು ಪ್ರತಿಭಟನಾಕಾರರು ಮುತ್ತಿಗೆ ಹಾಕಿ, ತೀವ್ರ ತರಾಟೆಗೆ ತೆಗೆದುಕೊಂಡರು. ಕೆಲ ದಿನಗಳ ಹಿಂದೆ ನೀಡಿದ್ದ ಗಡುವಿಗೆ ಕೇವಲ ಒಂದು ಲೋಡ್ ಕೆಂಪು ಕಲ್ಲುಗಳನ್ನು ತಂದು ಸುರಿದಿರುವುದಕ್ಕೆ ಪ್ರತಿಭಟನೆಯ ನೇತೃತ್ವ ವಹಿಸಿದ ಸಾಮಾಜಿಕ ಕಾರ್ಯಕರ್ತ ಯತೀಶ್ ಪೆರುವಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಇದು ಸುರಕ್ಷತಾ ಕ್ರಮವಲ್ಲ, ಜನರ ಕಣ್ಣಿಗೆ ಮಣ್ಣೆರಚುವ ತಂತ್ರ” ಎಂದು ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾಕಾರರ ತೀವ್ರ ಪ್ರತಿರೋಧದ ಬಳಿಕ ಮಾತನಾಡಿದ ಜಿಲ್ಲಾ ಪಂಚಾಯತ್ ಮತ್ತು ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ವೇಣುಗೋಪಾಲ್, ಅಗತ್ಯ ಸುರಕ್ಷಾ ಕ್ರಮದ ಭಾಗವಾಗಿ ನಾಳೆಯಿಂದಲೇ ಕೆಲಸ ಪ್ರಾರಂಭಿಸಿ ಒಂದು ವಾರದಲ್ಲಿ ತಡೆಬೇಲಿ ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸ ಲಾಗುವುದು. 15 ದಿನಗಳ ಒಳಗಾಗಿ ತಡೆಗೋಡೆ ಕಾಮಗಾರಿಯನ್ನು ಮುಗಿಸುತ್ತೇವೆ ” ಎಂದು ಭರವಸೆ ನೀಡಿದರು. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಅವಿನಾಶ್ ಮಾತನಾಡಿ, ಈಗಾಗಲೇ ಹೊಸ ಸೇತುವೆಯ ನಿರ್ಮಾಣಕ್ಕೆ ಹಾಗೂ ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಈ ಹಿಂದೆ ನೀವು ನೀಡಿದ ಮನವಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಹಂತದಲ್ಲಿ ಮಂಜೂರಾತಿ ದೊರೆತ ತಕ್ಷಣ ಹೊಸ ಸೇತುವೆ ನಿರ್ಮಾಣ ಮಾಡಲಾಗುವುದು ಎಂದರು.ಪ್ರತಿಭಟನೆಗೆ ಧ್ವನಿಗೂಡಿಸಿ ಗೋಪಾಲಕೃಷ್ಣ ಶೆಟ್ಟಿ ಸೇನೆರಪಾಲು,ಎಂ ಮಹಾಬಲ ಭಟ್ ಮುರುವ ,ಗಣೇಶ್ ಭಟ್ ದೇಲಂತಮಜಲು, ರಾಘವ ಮಾಸ್ಟರ್ ಬೆರಿಪದವು ಮಾತನಾಡಿದರು.

ಪ್ರತಿಭಟನೆಯ ಉದ್ದೇಶ, ಬೇಡಿಕೆಗಳು ಹಾಗೂ ಹೋರಾಟದ ಹಿನ್ನೆಲೆಯ ಕುರಿತು ಸಾಮಾಜಿಕ ಕಾರ್ಯಕರ್ತ ಯತೀಶ್ ಪೆರುವಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಮುಖರಾದ ಜಯರಾಮ ಆಳ್ವ ಬದಿಯಾರುರವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.ಸಂಘಟಕರಾದ ಮೋಕ್ಷಿತ್ ಪೆರುವಾಯಿ ವಂದಿಸಿದರು.ಪ್ರತಿಭಟನಾ ಸಭೆಯಲ್ಲಿ ಪ್ರಮುಖರಾದ, ಗೋಪಾಲಕೃಷ್ಣ ಶೆಟ್ಟಿ ಸೇನೆರಪಾಲು,ವಿನೀತ್ ಶೆಟ್ಟಿ ಕಾನ,ಪ್ರಭಾಕರ ಶೆಟ್ಟಿ ಕಳಾಯ್ತಿಮಾರ್,ಅಶೋಕ್ ಶೆಟ್ಟಿ ಮಾಣಿಲ, ವಿಷ್ಣು ಭಟ್ ಕನ್ನಡಗುಳಿ,ಪ್ರಕಾಶ್ಚಂದ್ರ ಶೆಟ್ಟಿ ಎ.ಕೆ ನಿಲಯ,ರಾಘವ ಮಾಸ್ಟರ್ ಬೆರಿಪದವು,ಗಿರೀಶ್ ಪಾಟಾಳಿ ಕೊಲ್ಲತ್ತಡ್ಕ ,ಹೇಮಂತ್ ಪಾಟಾಳಿ ಕೊಲ್ಲತ್ತಡ್ಕ,ಮನೋಜ್ ಆಚಾರ್ಯ ಪೆರುವಾಯಿ,ಗಣೇಶ್ ರೈ ಅಡಿವಾಯಿ, ಪಿ.ಕೆ ಶ್ರೀಧರ್ ಕುಕ್ಕಾಜೆ,ಸವಿತಾ ಆಚಾರ್ಯ ಅಶ್ವಥನಗರ, ಸೂರ್ಯ ಪ್ರಭಾ ಎ.ಕೆ ನಿಲಯ ಹಾಗೂ ಪೆರುವಾಯಿ ಗ್ರಾಮದ ನೂರಾರು ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು,ಕೃಷಿಕರು, ವ್ಯಾಪಾರಸ್ಥರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

- Advertisement -

Related news

error: Content is protected !!