





ನವದೆಹಲಿ: 14 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಸ್ಪೋರ್ಟ್ ಶುಲ್ಕವನ್ನು ಹೆಚ್ಚಿಸಿ ಕೇಂದ್ರ ಸರ್ಕಾರ ಇಂದು ಆದೇಶ ಹೊರಡಿಸಿದೆ. ಹೊಸ ದರವು ಜುಲೈ 1 ರಿಂದ ಜಾರಿಯಾಗಲಿದೆ.
ಪ್ರಮಾಣಿತ ಅಂದರೆ ಸಾಮಾನ್ಯ ಪಾಸ್ಪೋರ್ಟ್ ಪಡೆಯುವ ಶುಲ್ಕ 2,500 ರೂ.ಗಳಿಗೆ ಹಾಗೂ ತತ್ಕಾಲ್ ಯೋಜನೆ ಅಡಿಯಲ್ಲಿ ಪಾಸ್ಪೋರ್ಟ್ ಪಡೆಯುವ ಶುಲ್ಕವನ್ನು 5,000 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಹೊಸ ದರಗಳ ಅಡಿಯಲ್ಲಿ 18 ಅಥವಾ 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಅರ್ಜಿದಾರರಿಗೆ 36 ಪುಟಗಳ ಪಾಸ್ಪೋರ್ಟ್ ಶುಲ್ಕವನ್ನು 1,500 ರೂ.ನಿಂದ 2,500 ರೂ.ಗಳಿಗೆ ಹೆಚ್ಚಿಸಲಾಗಿದ್ದು, ತತ್ಕಾಲ್ ಶುಲ್ಕವನ್ನು 3,500 ರೂ.ಗಳಿಂದ 5,000 ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಅದೇ ರೀತಿ, 60 ಪುಟಗಳ ಪಾಸ್ಪೋರ್ಟ್ನ ಶುಲ್ಕವನ್ನು ಸಾಮಾನ್ಯ ವರ್ಗದ ಅಡಿಯಲ್ಲಿ 2,000 ರೂ.ಗಳಿಂದ 3,500 ರೂ.ಗಳಿಗೆ ಮತ್ತು ತತ್ಕಾಲ್ ಅಡಿಯಲ್ಲಿ 6,000 ರೂ.ಗಳಿಗೆ ಕೇಂದ್ರ ಹೆಚ್ಚಿಸಿದೆ.
ಕಳೆದುಹೋದ ಅಥವಾ ಹಾನಿಗೊಳಗಾದ ಪಾಸ್ಪೋರ್ಟ್ ಬದಲಿಸಲು (36 ಪುಟ) 5,000 ರೂ., ತತ್ಕಾಲ್ನಲ್ಲಿ 7,500 ರೂ. ಶುಲ್ಕ ಪಾವತಿಸಬೇಕಾಗುತ್ತದೆ. 60 ಪುಟಗಳ ಬದಲಿ ಪಾಸ್ಪೋರ್ಟ್ಗೆ ಸಾಮಾನ್ಯಕ್ಕೆ 6,000 ರೂ. ಹಾಗೂ ತತ್ಕಾಲ್ನಲ್ಲಿ 8,500 ರೂ. ಪಾವತಿ ಮಾಡಬೇಕಾಗುತ್ತದೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅರ್ಜಿದಾರರಿಗೆ 36 ಪುಟಗಳ ಹೊಸ ಅಥವಾ ಮರು ಪಾಸ್ಪೋರ್ಟ್ಗೆ ಸಾಮಾನ್ಯ ಯೋಜನೆ ಅಡಿಯಲ್ಲಿ 1,750 ರೂ. ಹಾಗೂ ತತ್ಕಾಲ್ ಅಡಿಯಲ್ಲಿ 4,250 ರೂ. ಶುಲ್ಕವಾಗಲಿದೆ. ಜೊತೆಗೆ ಅಪ್ರಾಪ್ತ ವಯಸ್ಕರು ಕಳೆದುಹೋದ ಅಥವಾ ಹಾನಿಗೊಳಗಾದ ಪಾಸ್ಪೋರ್ಟ್ ಬದಲಾಯಿಸಲು ಸಾಮಾನ್ಯ ಯೋಜನೆ ಅಡಿ 4,250 ರೂ. ಹಾಗೂ ತತ್ಕಾಲ್ ಅಡಿಯಲ್ಲಿ 6,750 ರೂ. ನಿಗದಿಪಡಿಸಲಾಗಿದೆ.
ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಗಳು, ಶರಣಾಗತಿ ಪ್ರಮಾಣಪತ್ರಗಳು, ವಿದೇಶಿ ಕಾರ್ಯಕ್ರಮದ ಪರಿಶೀಲನೆ ಮತ್ತು ಇತರ ವಿವಿಧ ಪಾಸ್ಪೋರ್ಟ್-ಸಂಬಂಧಿತ ಪ್ರಮಾಣಪತ್ರಗಳ ಶುಲ್ಕವನ್ನು ಭಾರತದಲ್ಲಿ 750 ರೂ. ಮತ್ತು ವಿದೇಶದಲ್ಲಿ 40 ಡಾಲರ್ಗಳಿಗೆ ನಿಗದಿಪಡಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.








