ದೂರು ನೀಡಿದ ಯುವತಿ; ಬಿಜೆಪಿ ಪ್ರಮುಖರಿಂದ ಯುವತಿ ಮನೆಗೆ ಭೇಟಿ- ಪ್ರತಿಭಟನೆಗೆ ಸಿದ್ಧತೆ..!!




ಪುತ್ತೂರು:ಯುವಕನೋರ್ವ ಚಾಕು ಹಿಡಿದುಕೊಂಡು ತನ್ನ ಮುಂದೆ ಹೋದ ಮತ್ತು ತಂಡದ ಜೊತೆ ವಾಹನವೊಂದರಲ್ಲಿ ತೆರಳಿರುವುದನ್ನು ಗಮನಿಸಿದ ಯುವತಿ, ಚಾಕು ತೋರಿಸಿ ವಾಹನವೊಂದರಲ್ಲಿ ಹಿಂಬಾಲಿಸಿರುವುದಾಗಿ ಆರೋಪಿಸಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದ್ದರೂ ಘಟನೆಗೆ ಸಂಬಂಧಿಸಿ ಯುವಕರು ನೀಡಿದ ದೂರನ್ನು ಸ್ವೀಕರಿಸಿರುವ ಪೊಲೀಸರು ದೂರು ನೀಡಿದ ಯುವತಿಯ ಮೇಲೆಯೂ ಪ್ರಕರಣ ದಾಖಲಿಸಿಕೊಂಡಿರುವುದನ್ನು ಖಂಡಿಸಿ ಬಿಜೆಪಿ ಮತ್ತು ಹಿಂದು ಸಂಘಟನೆಯವರು ಪ್ರತಿಭಟನೆಗೆ ಸಿದ್ದತೆ ನಡೆಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಜು.9ರಂದು ಬಿಜೆಪಿ ಮುಖಂಡರು ಮತ್ತು ಹಿಂದೂ ಸಂಘಟನೆಗಳ ಪ್ರಮುಖರು ಯುವತಿಯ ಮನೆಗೆ ಭೇಟಿ ನೀಡಿ ಯುವತಿಯ ತಂದೆ ಶಾಂತಪ್ಪ ಗೌಡ ಅವರಲ್ಲಿ ಮಾತುಕತೆ ನಡೆಸಿದ್ದಾರೆ.

ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಮುರಳಿಕೃಷ್ಣ ಹಸಂತಡ್ಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಶಶಿಧರ್ ನಾಯಕ್, ಸತೀಶ್ ನಾಯಕ್, ಪರ್ಲಡ್ಕ, ಸಂತೋಷ್ ಕೈಕಾರ, ರಾಜೇಶ್ ಬನ್ನೂರು, ವಿದ್ಯಾಧರ ಜೈನ್, ನಿತೀಶ್ ಕುಮಾರ್ ಶಾಂತಿವನ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ದೂರು ನೀಡಲು ಹೋದ ಯುವತಿ, ಯುವತಿಯ ತಂದೆ ಹಾಗೂ ಬಿಜೆಪಿ, ಹಿಂದೂ ಸಂಘಟನೆ ಮುಖಂಡರ ಸಹಿತ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ರೀತಿಯಾದರೆ, ಹೆಣ್ಣು ಮಗಳೊಬ್ಬಳು ತನಗಾದ ನೋವನ್ನು ಪೊಲೀಸರ ಬಳಿ ತಿಳಿಸಿದ್ದೇ ತಪ್ಪಾ?ಈ ಸಂಬಂಧ ತಾರತಮ್ಯ ನೀತಿ ಅನುಸರಿಸಿದ ಸರಕಾರ ಮತ್ತು ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.







