
ಸುರತ್ಕಲ್: ವಿದ್ಯಾರ್ಥಿಗೆ ಹೊಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮದರಸ ಅಧ್ಯಾಪಕರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಕೇಂದ್ರ ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿಯು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ದೂರಿನ ಪ್ರಕಾರ, ಉಡುಪಿ ಜಿಲ್ಲೆಯ ಹೆಜಮಾಡಿ ನಿವಾಸಿ ಹಾಗೂ ಮದರಸ ಅಧ್ಯಾಪಕರಾದ ಉಮರ್ ಫಾರೂಕ್ ಸಖಾಫಿ ಅವರು ವಿದ್ಯಾರ್ಥಿಯೊಬ್ಬನಿಗೆ ಶಿಕ್ಷೆ ನೀಡಿದ ವಿಚಾರವನ್ನು ಆಕ್ಷೇಪಿಸಿ, ಕೃಷ್ಣಾಪುರ 6ನೇ ಬ್ಲಾಕ್ ನಿವಾಸಿ ಶಂಸುದ್ದೀನ್ ಎಂಬಾತ ಕೃಷ್ಣಾಪುರದ ತ್ವೈಬಾ ಮಸೀದಿಗೆ ಅಕ್ರಮ ಪ್ರವೇಶಿಸಿ ಅಧ್ಯಾಪಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸುರತ್ಕಲ್ ಪೊಲೀಸರು ಶಂಸುದ್ದೀನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.ಈ ಕುರಿತು ಮಾತನಾಡಿರುವ ಶಂಸುದ್ದೀನ್ ಅವರ ಸಂಬಂಧಿ ಅಬ್ದುಲ್ ಬಶೀರ್, ವಿದ್ಯಾರ್ಥಿಗೆ ಶಿಕ್ಷೆ ನೀಡಿರುವ ವಿಷಯ ತಿಳಿದ ತಕ್ಷಣ ಮಸೀದಿ ಆಡಳಿತಕ್ಕೆ ಮಾಹಿತಿ ನೀಡಲಾಗಿತ್ತು.
ಬಳಿಕ ಘಟನೆ ಭಾವೋದ್ವೇಗದಲ್ಲಿ ನಡೆದಿದ್ದು, ಶಂಸುದ್ದೀನ್ ಅವರು ಅಧ್ಯಾಪಕರಲ್ಲಿ ಮೂರು ಬಾರಿ ಕ್ಷಮೆಯಾಚಿಸಿದ್ದರು. ಅಧ್ಯಾಪಕರೂ ಕ್ಷಮಿಸಿ ಕಳುಹಿಸಿದ್ದರಿಂದ ವಿಷಯ ಅಲ್ಲಿಯೇ ಮುಕ್ತಾಯಗೊಂಡಿತ್ತು. ಆದರೆ ಹಲ್ಲೆಯ ವೀಡಿಯೊ ವೈರಲ್ ಆದ ಬಳಿಕ ಪ್ರಕರಣ ಮತ್ತೆ ಚರ್ಚೆಗೆ ಬಂದಿದೆ ಎಂದು ತಿಳಿಸಿದ್ದಾರೆ. ಘಟನೆಯ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿದವರ ವಿರುದ್ಧವೂ ದೂರು ನೀಡಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಬಾಲಕನ ಬೆನ್ನಿಗೆ ಹೊಡೆದಿರುವ ವೀಡಿಯೊಗೆ ಈ ಪ್ರಕರಣದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತ್ವೈಬಾ ಜುಮಾ ಮಸೀದಿಯ ಖತೀಬ್ ಮುಸ್ತಫಾ ಸಅದಿ ಸ್ಪಷ್ಟಪಡಿಸಿದ್ದಾರೆ. ಸಂಬಂಧಿತ ವಿದ್ಯಾರ್ಥಿಗೆ ಮೊಣಕಾಲಿನ ಕೆಳಭಾಗಕ್ಕೆ ಎರಡು ಪೆಟ್ಟು ಮಾತ್ರ ನೀಡಲಾಗಿದ್ದು, ವೈರಲ್ ಆಗಿರುವ ಚಿತ್ರ ಹಾಗೂ ವೀಡಿಯೊ ನಮ್ಮ ಮದರಸದ ವಿದ್ಯಾರ್ಥಿಯದ್ದಲ್ಲ ಎಂದು ಅವರು ತಿಳಿಸಿದ್ದಾರೆ.
ಮಸೀದಿಯ ಆಡಳಿತ ಸಮಿತಿಯ ಕಾರ್ಯದರ್ಶಿ ಹನೀಫ್ ಮಾತನಾಡಿ, ಮಕ್ಕಳಿಗೆ ಶಿಕ್ಷೆ ನೀಡಿರುವ ಬಗ್ಗೆ ಅಸಮಾಧಾನವಿದ್ದರೆ ಪೋಷಕರು ಮಸೀದಿ ಜಮಾಅತ್ ಸಮಿತಿಗೆ ದೂರು ನೀಡಬೇಕಾಗಿತ್ತು. ಕಾನೂನನ್ನು ಕೈಗೆತ್ತಿಕೊಂಡು ಅಧ್ಯಾಪಕರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಆಡಳಿತ ಸಮಿತಿಯ ತುರ್ತು ಸಭೆಯ ತೀರ್ಮಾನದಂತೆ ಶಂಸುದ್ದೀನ್ ವಿರುದ್ಧ ದೂರು ದಾಖಲಿಸಲಾಗಿದ್ದು, ಪ್ರಕರಣದ ಕುರಿತು ಸುರತ್ಕಲ್ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.








