Wednesday, July 15, 2026
spot_imgspot_img
spot_imgspot_img

ದಸರಾಕ್ಕೆ ಧಕ್ಕೆ ಇಲ್ಲ, ಕಂಬಳ ಡಿಸ್ಕೋ ಡ್ಯಾನ್ಸ್ ಅಲ್ಲ: ಅದು ನಮ್ಮ ಸಾಂಸ್ಕೃತಿಕ ಕ್ರೀಡೆ ಶಾಸಕ ಅಶೋಕ್ ರೈ ಸ್ಪಷ್ಟನೆ

- Advertisement -
- Advertisement -

ಪುತ್ತೂರು, ಜು.14: ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆಗೆ ವ್ಯಕ್ತವಾಗಿರುವ ವಿರೋಧದ ನಡುವೆ, ಶಾಸಕ ಅಶೋಕ್ ಕುಮಾರ್ ರೈ ಸ್ಪಷ್ಟನೆ ನೀಡಿ, “ಕಂಬಳದಿಂದ ದಸರಾಕ್ಕೆ ಯಾವುದೇ ಧಕ್ಕೆ ಇಲ್ಲ. ಕಂಬಳ ಯಾವುದೋ ಡಿಸ್ಕೋ ಡ್ಯಾನ್ಸ್ ಅಲ್ಲ; ಇದು ನಮ್ಮ ಸಾಂಸ್ಕೃತಿಕ ಕ್ರೀಡೆ” ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾದ ಸಾಂಸ್ಕೃತಿಕ ಆಚರಣೆಗಳಿಗೆ ವಿರುದ್ಧವಾಗಿ ಕಂಬಳವನ್ನು ಆಯೋಜಿಸುವ ಪ್ರಶ್ನೆಯೇ ಇಲ್ಲ. ಬದಲಾಗಿ, ವಿಶ್ವದ ಮೂಲೆಮೂಲೆಗಳಿಂದ ದಸರಾಕ್ಕೆ ಆಗಮಿಸುವ ಜನರಿಗೆ ಕರಾವಳಿಯ ಹೆಮ್ಮೆಯ ಕಂಬಳವನ್ನು ವೀಕ್ಷಿಸುವ ಅವಕಾಶ ಸಿಗಲಿದೆ ಎಂದರು.ಬೆಂಗಳೂರು ಕಂಬಳಕ್ಕೂ ಆರಂಭದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ ಬಳಿಕ ಎಲ್ಲ ಸಂಘಟನೆಗಳು ಸಹಕರಿಸಿದ್ದವು. ಅದೇ ರೀತಿ ಮೈಸೂರಿನಲ್ಲಿಯೂ ಬಹುತೇಕ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿರೋಧ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದರು.

ದಸರಾದಲ್ಲಿ ಈಗಾಗಲೇ ಯುವ ದಸರಾ, ಲೇಸರ್ ಶೋ, ಏರ್ ಶೋ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಹಾಗಿದ್ದಾಗ, ಶತಮಾನಗಳ ಇತಿಹಾಸ ಹೊಂದಿರುವ ಕಂಬಳವನ್ನು ವಿರೋಧಿಸುವ ಅಗತ್ಯವೇ ಇಲ್ಲ ಎಂದು ಪ್ರಶ್ನಿಸಿದ ಅವರು, ಕಂಬಳವು ರಾಜಮನೆತನದ ಕಾಲದಿಂದಲೂ ಬಂದಿರುವ ಸಾಂಸ್ಕೃತಿಕ ಕ್ರೀಡೆಯಾಗಿದೆ ಎಂದು ಹೇಳಿದರು.ಮೈಸೂರು ದಸರಾಕ್ಕೆ ರಾಜ್ಯ ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಲಿದ್ದು, ಕಂಬಳ ಆಯೋಜನೆಯ ವೆಚ್ಚವನ್ನೂ ಸರ್ಕಾರವೇ ವಹಿಸಲಿದೆ ಎಂದು ತಿಳಿಸಿದರು. ಈಗಾಗಲೇ ಸುಮಾರು 700 ಕೊಠಡಿಗಳು ಬುಕ್ ಆಗಿದ್ದು, ಕಂಬಳದಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂದರು.

ರಿಂಗ್‌ರೋಡ್ ಸಮೀಪ ಸುಮಾರು 20 ಎಕರೆ ಪ್ರದೇಶದಲ್ಲಿ ಕಂಬಳ ಅಖಾಡ ಹಾಗೂ 15 ಎಕರೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮೂರು ವೇದಿಕೆಗಳು, ಸಾರ್ವಜನಿಕರ ಪ್ರವೇಶ-ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ, ಕೋಣಗಳ ವಿಶ್ರಾಂತಿ ಸ್ಥಳ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಮಾಸ್ಟರ್ ಪ್ಲಾನ್ ಪ್ರಕಾರ ಸಿದ್ಧಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೈಸೂರು ಕಂಬಳ ಸಮಿತಿ ಕಾರ್ಯನಿರ್ವಹಿಸಲಿದ್ದು, ತಾವು ಅಧ್ಯಕ್ಷರಾಗಿರುತ್ತೇನೆ. ಕಂಬಳ ಆಯೋಜಕರು, ಕೋಣಗಳ ಮಾಲೀಕರು ಹಾಗೂ ಜಿಲ್ಲಾ ಸಮಿತಿಯ ಸದಸ್ಯರನ್ನು ಒಳಗೊಂಡ ಸಮಿತಿ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಕೆಲಸ ಮಾಡಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.

- Advertisement -

Related news

error: Content is protected !!