


ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜುಲೈ 1 ರಂದು ದಾಖಲಾಗಿದ್ದ ಯುಡಿಆರ್ ಪ್ರಕರಣದ ತನಿಖೆ ವೇಳೆ ಕಳವು ಕೃತ್ಯ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತನಿಖೆಯಲ್ಲಿ, ಕುವೆಟ್ಟು ಶಕ್ತಿನಗರದಲ್ಲಿರುವ ಸಂಸ್ಥೆಯೊಂದರ ಆವರಣದಿಂದ ಅಲ್ಯೂಮಿನಿಯಂ ಹಾಗೂ ಕಬ್ಬಿಣದ ವಸ್ತುಗಳನ್ನು ಕಳವು ಮಾಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 73/2026ರಡಿ ಬಿಎನ್‌ಎಸ್-2023ರ ಕಲಂ 331(4), 305 ಹಾಗೂ 3(5)ರಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಯಿತು.
ಪ್ರಕರಣ ಸಂಬಂಧ ಬೆಳ್ತಂಗಡಿ ಕಾಶಿಪಟ್ನ ನಿವಾಸಿ ಪಿ. ಇಬ್ರಾಹಿಂ ಲತೀಫ್ (36) ಎಂಬಾತನನ್ನು ಜುಲೈ 14ರಂದು ಬಂಧಿಸಲಾಯಿತು.
ವಿಚಾರಣೆ ವೇಳೆ, ಮೃತ ಮುಶ್ತಕ್ ಹಾಗೂ ಇಬ್ರಾಹಿಂ ಲತೀಫ್ ಮತ್ತೋರ್ವ ಆರೋಪಿಯೊಂದಿಗೆ ಸೇರಿ ಜೂನ್ 30ರ ರಾತ್ರಿ ಕುವೆಟ್ಟು ಶಕ್ತಿನಗರದಲ್ಲಿರುವ ಸಂಸ್ಥೆಯೊಂದರ ಆವರಣದಿಂದ ಅಲ್ಯೂಮಿನಿಯಂ ಮತ್ತು ಕಬ್ಬಿಣದ ಸಾಮಗ್ರಿಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಮುಶ್ತಕ್ ಅವರ ಕುತ್ತಿಗೆಗೆ ಕಬ್ಬಿಣದ ತಂತಿ ಸಿಲುಕಿ ಮೃತಪಟ್ಟಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ.
ಆರೋಪಿಯಿಂದ ಕಳವು ಮಾಡಲಾಗಿದ್ದ 550 ಕೆಜಿ ಅಲ್ಯೂಮಿನಿಯಂ ವೈರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ, ಆರೋಪಿ ವೇಣೂರು, ಉಪ್ಪಿನಂಗಡಿ, ಅರೆಹಳ್ಳಿ ಹಾಗೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೂ ಸೇರಿ ಒಟ್ಟು 16 ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ಬೆಳ್ತಂಗಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








