


ಕೋಲ್ಕತ್ತಾ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದಿದೆ.
ಮುರ್ಷಿದಾಬಾದ್‌ನ ಬೆಹ್ರಾಂಪುರ ಪ್ರದೇಶದ ಕರ್ಣಸುಬರ್ಣ ರೈಲ್ವೆ ಕ್ರಾಸಿಂಗ್ ಬಳಿ ಬೆಳಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಶಾಲಾ ವ್ಯಾನ್‌ಗೆ ನಿಮ್ತಿತಾ-ಕಟ್ವಾ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ವ್ಯಾನ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ರೈಲ್ವೆ ಹಳಿ ಮೇಲೆ ವ್ಯಾನ್ ಬಿದ್ದಿರುವ ದೃಶ್ಯ ಎದೆಝಲ್ ಎನ್ನುವಂತಿದೆ
ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ರೈಲ್ವೆ ಗೇಟ್‌ಮ್ಯಾನ್‌ನ ಬೇಜವಾಬ್ದಾರಿತನವೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಒಂದು ರೈಲು ಹೋದ ತಕ್ಷಣ ಗೇಟ್‌ಮ್ಯಾನ್ ಗೇಟ್ ತೆರೆದಿದ್ದನು. ಆದರೆ, ಪಕ್ಕದ ಹಳಿಯಲ್ಲೇ ಮತ್ತೊಂದು ರೈಲು ಬರುತ್ತಿದ್ದರೂ ಆತ ಗೇಟ್ ಹಾಕದೇ ನಿರ್ಲಕ್ಷ್ಯ ವಹಿಸಿದ್ದಾನೆ. ಗೇಟ್ ಓಪನ್ ಇದ್ದಿದ್ದರಿಂದ ಶಾಲಾ ವ್ಯಾನ್ ಹಳಿ ದಾಟಲು ಮುಂದಾದಾಗ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.
ಕಟ್ವಾದಿಂದ ಸುಮಾರು 48 ಕಿ.ಮೀ ದೂರದಲ್ಲಿರುವ ಕರ್ಣ ಸುಬರ್ಣ ನಿಲ್ದಾಣದ ಬಳಿ ಕ್ರಾಸಿಂಗ್ ಗೇಟ್ ದಾಟುತ್ತಿದ್ದಾಗ ರೈಲು ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಹಿರಿಯ ಪೊಲೀಸ್ ಹಾಗೂ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಕರ್ತವ್ಯ ಲೋಪ ಎಸಗಿದ ಗೇಟ್‌ಮ್ಯಾನ್ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.








