Friday, July 17, 2026
spot_imgspot_img
spot_imgspot_img

ವಿಟ್ಲದ ಕಡಂಬು ಸಹಿತ ಹಲವು ಕಡೆ ಕಳವು ಪ್ರಕರಣ ಭೇದಿಸಿದ ಪೊಲೀಸರು: ನೇಪಾಳ ಮೂಲದ ಮೂವರು ಅಂತಾರಾಷ್ಟ್ರೀಯ ಮನೆಗಳ್ಳರ ಬಂಧನ

- Advertisement -
- Advertisement -

ಪುತ್ತೂರು: ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು, ನೇಪಾಳ ಮೂಲದ ಮೂವರು ಕುಖ್ಯಾತ ಅಂತಾರಾಷ್ಟ್ರೀಯ ಮನೆಗಳ್ಳರನ್ನು ಬಂಧಿಸಿ, ಸುಮಾರು ₹10 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರು ವಿಟ್ಲದ ಕಡಂಬು ಸೇರಿದಂತೆ ದಕ್ಷಿಣ ಕನ್ನಡದ ವಿವಿಧ ಭಾಗಗಳಲ್ಲಿ ನಡೆದ ಕಳವು ಪ್ರಕರಣಗಳಲ್ಲೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಬಂಧಿತ ಆರೋಪಿಗಳನ್ನು ತಿಲಕ್ ಕುಮಾರ್ ಖಡ್ಕ (36), ಅಶೋಕ್ ರಾಜ್ ಅಲಿಯಾಸ್ ಅಶೋಕ್ ಸಿಂಗ್ ಠಾಕುರಿ (33) ಹಾಗೂ ದಿಪೆಂದರ್ ರಸೈಲಿ (25) ಎಂದು ಗುರುತಿಸಲಾಗಿದೆ. ಮೂವರೂ ನೇಪಾಳ ಮೂಲದವರಾಗಿದ್ದಾರೆ.ಜುಲೈ 11ರಂದು ಉರ್ವ ಮಾರ್ಕೆಟ್ ಸಮೀಪದ ಮಠದಕಣಿ ನಿವಾಸದ ಮನೆಯವರು ಮನೆಗೆ ಬೀಗ ಹಾಕಿ ತೆರಳಿದ್ದ ವೇಳೆ, ಕಳ್ಳರು ಹಿಂಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಸುಮಾರು 64 ಗ್ರಾಂ ಚಿನ್ನಾಭರಣ, ₹25,000 ನಗದು ಸೇರಿದಂತೆ ₹8.57 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದರು.

ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ನಡೆಸಿದ ಪೊಲೀಸರು ಜುಲೈ 17ರ ಮುಂಜಾನೆ ಬೋಳೂರಿನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಚಿನ್ನಾಭರಣಗಳ ಜೊತೆಗೆ ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಕಳವು ಮಾಡಲಾಗಿದ್ದ 790 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಒಟ್ಟು ಸೊತ್ತಿನ ಮೌಲ್ಯ ಸುಮಾರು ₹10 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.ವಿಚಾರಣೆ ವೇಳೆ ಆರೋಪಿಗಳು 2026ರ ಮಾರ್ಚ್‌ನಲ್ಲಿ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಯತ್ನ ಪ್ರಕರಣದಲ್ಲೂ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಬೆಂಗಳೂರು, ದಾವಣಗೆರೆ, ಉಡುಪಿ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ 15ಕ್ಕೂ ಹೆಚ್ಚು ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ.ಇದಲ್ಲದೆ ತಮಿಳುನಾಡು, ದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲಿಯೂ ಆರೋಪಿಗಳ ವಿರುದ್ಧ ಪ್ರಕರಣಗಳಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣದ ಭೇದನೆಯಲ್ಲಿ ಬರ್ಕೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದ್ದಾರೆ.

- Advertisement -

Related news

error: Content is protected !!