
ಮಂಗಳೂರು: ಬರ್ಗರ್, ಪಿಜ್ಜಾ ಸೇರಿದಂತೆ ಜಂಕ್ ಫುಡ್‌ಗಳ ಸೇವನೆಯಿಂದ ವಿವಿಧ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, 10ನೇ ತರಗತಿಯವರೆಗಿನ ಶಾಲೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ಆಹಾರ ಪದಾರ್ಥಗಳ ಬಳಕೆಯನ್ನು ನಿಷೇಧಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.ಶನಿವಾರ ನಗರದ ವೆನ್‌ಲಾಕ್ ಆಸ್ಪತ್ರೆಯ ಆರ್‌ಎಪಿಸಿಸಿ (ಮಕ್ಕಳ ಆಸ್ಪತ್ರೆ) ಸಭಾಂಗಣದಲ್ಲಿ ಆಸ್ಪತ್ರೆಯ ಕುಂದುಕೊರತೆಗಳು ಹಾಗೂ ಅಭಿವೃದ್ಧಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಆಹಾರ ಸುರಕ್ಷತೆಯಲ್ಲಿ ಮಹತ್ತರ ಬದಲಾವಣೆ ತರಲು ಬೆಂಗಳೂರಿನಲ್ಲಿರುವ ಆಹಾರ ಪದಾರ್ಥಗಳ ತಪಾಸಣಾ ಪ್ರಯೋಗಾಲಯ (ಲ್ಯಾಬ್)ವನ್ನು ಮೇಲ್ದರ್ಜೆಗೇರಿಸುವ ಕಾರ್ಯವೂ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.ಜಂಕ್ ಫುಡ್ ತಯಾರಿಸುವ ಅದೆಷ್ಟೇ ದೊಡ್ಡ ಕಂಪನಿಗಳಾಗಿದ್ದರೂ, ಆಹಾರದ ಗುಣಮಟ್ಟದಲ್ಲಿ ಲೋಪದೋಷಗಳು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲು ಅಗತ್ಯ ದಾಖಲೆಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ಪ್ರಯೋಗಾಲಯವನ್ನು ರಾಜ್ಯದಲ್ಲಿ ಸ್ಥಾಪಿಸಲಾಗುವುದು. ಈ ಸಂಬಂಧ ಈಗಾಗಲೇ ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಅವರು ಹೇಳಿದರು.ಈ ಕುರಿತು ಸಮಗ್ರ ಪರಾಮರ್ಶೆ ನಡೆಸುವಂತೆ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಮುಂದಿನ ವರ್ಗಾವಣೆ ಪ್ರಕ್ರಿಯೆಯಿಂದಲೇ ಕೌನ್ಸೆಲಿಂಗ್ ನಿಯಮದಲ್ಲಿ ತಿದ್ದುಪಡಿ ತರಲಾಗುವುದು ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿಲ್ಲಾ ಪಂಚಾಯತ್ ಸಿಇಒ ವಿನಾಯಕ ಕರ್ಭಾರಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಹಾಗೂ ವೆನ್‌ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್ ಉಪಸ್ಥಿತರಿದ್ದರು.








