

ಗುವಾಹಟಿ: ಅಸ್ಸಾಂನಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿ ದಿನದಿಂದ ದಿನಕ್ಕೆ ಮತ್ತಷ್ಟು ಗಂಭೀರವಾಗುತ್ತಿದೆ. ಬುಧವಾರ ಒಂದೇ ದಿನ 21 ಮಂದಿ ಪ್ರಾಣ ಕಳೆದುಕೊಂಡಿದ್ದು, ರಾಜ್ಯದ 16 ಜಿಲ್ಲೆಗಳಲ್ಲಿನ 5.64 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವರ್ಷ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಅಂದರೆ 13 ಮಂದಿ ಮೃತಪಟ್ಟಿದ್ದಾರೆ. ಚರೈದಿಯೋ ಜಿಲ್ಲೆಯಲ್ಲಿ ಐವರು, ಗೋಲಾಘಾಟ್‌ನಲ್ಲಿ ಇಬ್ಬರು ಹಾಗೂ ಜೋರ್ಹಾಟ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಪ್ರವಾಹದಿಂದ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಲ್ಲಿ ಶಿವಸಾಗರ್, ಜೋರ್ಹಾಟ್ ಹಾಗೂ ಚರೈದಿಯೋ ಪ್ರಮುಖವಾಗಿವೆ. ಶಿವಸಾಗರ್ ಜಿಲ್ಲೆಯಲ್ಲಿ 3,59,535 ಮಂದಿ, ಜೋರ್ಹಾಟ್‌ನಲ್ಲಿ 87,662 ಮಂದಿ ಮತ್ತು ಚರೈದಿಯೋ ಜಿಲ್ಲೆಯಲ್ಲಿ 72,646 ಮಂದಿ ಪ್ರವಾಹದಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಇಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳ ಪರಿಶೀಲನೆ ನಡೆಸಿದ್ದಾರೆ. ಚರೈದಿಯೋ, ನಜಿರಾ, ಶಿವಸಾಗರ್, ಸೋನಾರಿ, ಜೋರ್ಹಾಟ್ ಹಾಗೂ ತಿಯೋಕ್ ಪ್ರದೇಶಗಳ ಶಿಬಿರಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಮೇಘಸ್ಫೋಟದಿಂದ ಅಸ್ಸಾಂನಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಜನರು ಅಪಾರ ಸಂಕಷ್ಟ ಅನುಭವಿಸುತ್ತಿದ್ದಾರೆ. ಪರಿಹಾರ ಕಾರ್ಯಗಳನ್ನು ಇನ್ನಷ್ಟು ವೇಗಗೊಳಿಸಲು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಸಿಎಂ ಶರ್ಮಾ ತಿಳಿಸಿದ್ದಾರೆ.
ಗೋಲಾಘಾಟ್, ಕಾಮರೂಪ್, ಹೊಜೈ, ದಿಬ್ರುಗಢ, ಬಿಸ್ವನಾಥ್, ಧೇಮಾಜಿ, ಸೋನಿತ್ಪುರ್, ಉದಾಲ್ಗುರಿ, ನಾಗಾಂವ್, ಚರೈದಿಯೋ, ಕಾಮರೂಪ್ ಮೆಟ್ರೋ, ಜೋರ್ಹಾಟ್, ಟಿನ್ಸುಕಿಯಾ, ಕಾರ್ಬಿ ಆಂಗ್ಲಾಂಗ್, ಲಖಿಂಪುರ ಹಾಗೂ ಶಿವಸಾಗರ್ ಜಿಲ್ಲೆಗಳು ಪ್ರವಾಹದಿಂದ ತೀವ್ರವಾಗಿ ಬಾಧಿತವಾಗಿವೆ.
ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ವಾಯುಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದಾರೆ.








