ಮಂಗಳೂರು: ಕಾಲೇಜು ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ಸೇವನೆ ತಡೆಗಟ್ಟುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದ ವತಿಯಿಂದ ಸೋಮವಾರ ಸಂಜೆ ದಿಢೀರ್ ಡ್ರಗ್ ಟೆಸ್ಟ್ ಕಾರ್ಯಾಚರಣೆ ನಡೆಸಲಾಯಿತು.


ದಕ್ಷಿಣ ಮತ್ತು ಕೇಂದ್ರ ವಿಭಾಗದ ಎಸಿಪಿಗಳ ಸಮನ್ವಯದಲ್ಲಿ, ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅವರ ಮೇಲ್ವಿಚಾರಣೆಯಲ್ಲಿ ಕೋಟೆಕಾರ ಬೀರಿ ಹಾಗೂ ಕೊಣಾಜೆ ಬಂಟ್ಸ್ ಭವನದಲ್ಲಿ ಈ ಕಾರ್ಯಾಚರಣೆ ನಡೆಯಿತು.ಖಾಸಗಿ ಹಾಗೂ ಕಾಲೇಜು ಬಸ್‌ಗಳಲ್ಲಿ ಸಂಚರಿಸುತ್ತಿದ್ದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ತಡೆದು ಮಲ್ಟಿ ಡ್ರಗ್ ಟೆಸ್ಟಿಂಗ್ ಕಿಟ್‌ಗಳ ಮೂಲಕ ಪರೀಕ್ಷಿಸಲಾಯಿತು.ಉಳ್ಳಾಲ ವ್ಯಾಪ್ತಿಯ ಕೋಟೆಕಾರ ಬೀರಿಯಲ್ಲಿ ಎಸ್‌ಡಿಎಂ ಕಾಲೇಜು, ನಿಟ್ಟೆ ಕೆ.ಎಸ್. ಹೆಗ್ಡೆ, ಸೇಂಟ್ ಅಲೋಶಿಯಸ್, ಪಿಎ ಕಾಲೇಜು, ಬಿಯರೀಸ್ ಇನ್‌ಸ್ಟಿಟ್ಯೂಟ್, ಟಿಪ್ಪು ಸುಲ್ತಾನ್ ಕಾಲೇಜು ಹಾಗೂ ಕೆನರಾ ಕಾಲೇಜಿನ ಒಟ್ಟು 72 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಯಿತು.

ಇವರಲ್ಲಿ 71 ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದ್ದು, ಒಬ್ಬ ವಿದ್ಯಾರ್ಥಿಯ ವರದಿ ಪಾಸಿಟಿವ್ ಬಂದಿದೆ.ಇದೇ ವೇಳೆ, ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ಸ್ ಭವನದಲ್ಲಿ ಪಿಎ ಕಾಲೇಜಿನ ಎರಡು ಬಸ್‌ಗಳಲ್ಲಿದ್ದ 87 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಸಂಜೆ 4.30ರಿಂದ 6.00 ಗಂಟೆಯವರೆಗೆ ಈ ವಿಶೇಷ ಕಾರ್ಯಾಚರಣೆ ನಡೆಯಿತು.ಒಟ್ಟು 159 ವಿದ್ಯಾರ್ಥಿಗಳ ಪೈಕಿ ಕೇವಲ ಒಬ್ಬ ವಿದ್ಯಾರ್ಥಿಗೆ ಮಾತ್ರ ಡ್ರಗ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿರುವುದು ಡ್ರಗ್ ಸೇವನೆ ಪ್ರಕರಣಗಳು ಇಳಿಮುಖವಾಗುತ್ತಿರುವುದಕ್ಕೆ ಸೂಚಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವುದು ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದುವರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಡ್ರಗ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ವಿದ್ಯಾರ್ಥಿಯನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಕೌನ್ಸೆಲಿಂಗ್‌ಗೆ ಕಳುಹಿಸಲಾಗುವುದು. ಜೊತೆಗೆ ಮುಂದಿನ ದಿನಗಳಲ್ಲಿಯೂ ನಿರಂತರ ಫಾಲೋಅಪ್ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.








