Saturday, August 8, 2026
spot_imgspot_img
spot_imgspot_img

ಕೋಗಿಲು ಬಡಾವಣೆ ನಿರಾಶ್ರಿತರ ದಾಖಲೆಗಳು ಕಾನೂನುಬದ್ಧವಾಗಿಲ್ಲ; ಹೈಕೋರ್ಟ್‌ಗೆ ಸರಕಾರದ ಮಾಹಿತಿ

- Advertisement -
- Advertisement -

ಬೆಂಗಳೂರು : ಯಲಹಂಕ ಬಳಿಯ ಕೋಗಿಲು ಬಡಾವಣೆಯಲ್ಲಿನ ವಾಸಿಂ ಮತ್ತು ಫಕೀರ್ ಕಾಲನಿಗಳಲ್ಲಿನ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ನಿರಾಶ್ರಿತರಾದವರು ಸಲ್ಲಿಸಿರುವ ದಾಖಲೆಗಳು ಕಾನೂನುಬದ್ಧವಾಗಿಲ್ಲ ಎಂದು ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.ಮನೆಗಳ ತೆರವು ಕಾರ್ಯಾಚರಣೆಯನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹಾನಾ ಹಾಗೂ ಆರೀಫ್‌ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್‌. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.ರಾಜ್ಯ ಸರಕಾರದ ಪರ ಹಾಜರಾದ ಹೆಚ್ಚುವರಿ ಅಡ್ವಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು ಅರ್ಜಿಗೆ ಆಕ್ಷೇಪಣೆಗಳನ್ನು ಸಲ್ಲಿಸಿದರಲ್ಲದೆ, ಪುನರ್ವಸತಿ ಕೇಂದ್ರಗಳಿಗೆ ಕೋಗಿಲು ಬಡಾವಣೆ ಜನ ಬರುತ್ತಿಲ್ಲ. ಮನೆಗಳನ್ನು ನೆಲೆಸಮಗೊಳಿಸಿರುವ ಜಾಗದಲ್ಲಿಯೇ ನಿವಾಸಿಗಳು ಉಳಿದುಕೊಂಡು ಮತ್ತೆ ಗುಡಿಸಲುಗಳನ್ನು ಹಾಕಿಕೊಳ್ಳಲು ಯತ್ನಿಸುತ್ತಿದ್ದಾರೆ. ಇನ್ನೂ ಅವರಿಗೆ ಆ ಜಾಗ ಜಿಲ್ಲಾಧಿಕಾರಿ ಮಂಜೂರು ಮಾಡಿದ ಬಗ್ಗೆ ದಾಖಲೆಗಳೇ ಇಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.ಮುಂದುವರಿದು, ನ್ಯಾಯಾಲಯ ಅರ್ಜಿದಾರರಿಗೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿತ್ತು. ಅದರಲ್ಲಿ 6 ಮಂದಿ ಸಲ್ಲಿಸಿರುವ ದಾಖಲೆಗಳು ಸೆಕ್ಷನ್ 94 ಸಿಸಿ ಪ್ರಕಾರ ಪರಿಶೀಲನೆ ನಡೆಸಲಾಗಿದ್ದು, ಅವು ನೈಜವಲ್ಲವೆಂಬುದು ತಿಳಿದು ಬಂದಿದೆ.

ಇನ್ನುಳಿದ 8 ಮಂದಿ ಸಲ್ಲಿಸಿರುವ ದಾಖಲೆಗಳು, ಸದ್ಯ ತೆರವು ಮಾಡಿರುವ ಜಾಗಕ್ಕೆ ಸಂಬಂಧಿಸಿದ್ದಲ್ಲ, ಬೇರೆ ಜಾಗಕ್ಕೆ ಸಂಬಂಧಿಸಿವೆ. ವಿವಾದಿತ ಜಾಗವನ್ನು ಸರಕಾರದ ವತಿಯಿಂದ ಯಾರಿಗೂ ಹಂಚಿಕೆ ಮಾಡಿಲ್ವ, ಹಕ್ಕುಪತ್ರಗಳನ್ನೂ ನೀಡಿಲ್ಲ. ಅಲ್ಲಿ ಮೂಲತಃ ಮನೆಯ ಕಟ್ಟಡಗಳು ಇರಲಿಲ್ವ, ಕೇವಲ ಗುಡಿಸಲಿನ ರೀತಿ ಇದ್ದ ಮನೆಗಳನ್ನು ತೆರವುಗೊಳಿಸಲಾಗಿದೆ ಎಂದು ವಿವರಿಸಿದರು.ಇದೇ ವೇಳೆ, ಸ್ಥಳದಲ್ಲಿನ ವಸ್ತುಸ್ಥಿತಿ ಬಗ್ಗೆ ಅಮೈಕಸ್‌ ಕ್ಯೂರಿ ಬಿ.ವಿ. ವಿದ್ಯುಲ್ಲತಾ ಅವರು ವರದಿ ಸಲ್ಲಿಸಿದರು.ಇವುಗಳನ್ನು ದಾಖಲಿಸಿಕೊಂಡ ನ್ಯಾಯಪೀಠ, ಸರಕಾರದ ಆಕ್ಷೇಪಣೆಗೆ ಪ್ರತಿ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರ ಪರ ವಕೀಲರಿಗೆ ಒಂದು ವಾರ ಕಾಲಾವಕಾಶ ನೀಡಿ ಅರ್ಜಿ ವಿಚಾರಣೆಯನ್ನು ಒಂದು ವಾರ ಮುಂದೂಡಿತು.

- Advertisement -

Related news

error: Content is protected !!