



ನವದೆಹಲಿ : ಗ್ರಾಹಕರಿಗೆ ಯುಪಿಐಪಾವತಿ ಸಂಪೂರ್ಣ ಉಚಿತವಾಗಿರಲಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಎಲ್ಲಾ ವಹಿವಾಟುಗಳು ಉಚಿತವಾಗಿಯೇ ಮುಂದುವರಿಯಲಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಯುಪಿಐ ಮೂಲಕ ಪಾವತಿ ಮಾಡುವಾಗ ಗ್ರಾಹಕರು ಯಾವುದೇ ವಹಿವಾಟು ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಬಹುತೇಕ ವರ್ತಕರ ವಹಿವಾಟುಗಳು ಸಹ ಸಂಪೂರ್ಣ ಉಚಿತವಾಗಿ ಉಳಿಯಲಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಒಂದು ವೇಳೆ ಎಂಡಿಆರ್ ಶುಲ್ಕವನ್ನು ವಿಧಿಸಿದರೂ, ಅದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸುವ ಸಣ್ಣ ಪ್ರಮಾಣದ ವರ್ತಕರಿಗೆ ಮಾತ್ರ ಅನ್ವಯಿಸಲಿದ್ದು, ಆ ಮೊತ್ತವೂ ಬಹಳ ಕಡಿಮೆ ಇರಲಿದೆ ಎಂದು ಸರ್ಕಾರ ಖಚಿತಪಡಿಸಿದೆ.
ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆಗೆ ತರಲಾದ ತಿದ್ದುಪಡಿಯು ಯುಪಿಐ ವ್ಯವಸ್ಥೆಯ ದೀರ್ಘಕಾಲೀನ ಸುಸ್ಥಿರತೆ, ತಾಂತ್ರಿಕ ಪ್ರಗತಿ ಮತ್ತು ಹೊಸ ಮಾದರಿಯ ಸೈಬರ್ ಅಪಾಯಗಳನ್ನು ಎದುರಿಸುವ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ವಹಿವಾಟುಗಳ ಪ್ರಮಾಣ ಬೆಳೆದಂತೆ ಸೈಬರ್ ಭದ್ರತೆ, ವಂಚನೆ ತಡೆಗಟ್ಟುವಿಕೆ, ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳಲ್ಲಿ ನಿರಂತರ ಹೂಡಿಕೆ ಅಗತ್ಯವಾಗಿದ್ದು, ಭಾರತದ ಡಿಜಿಟಲ್ ಪಾವತಿ ಮೂಲಸೌಕರ್ಯದ ಪ್ರಮುಖ ಭಾಗವಾಗಿ ಯುಪಿಐ ಬೆಳೆಯುತ್ತಿರುವ ಮಹತ್ವವನ್ನು ಸರ್ಕಾರ ಎತ್ತಿಹಿಡಿದಿದೆ. ಕಳೆದ ತಿಂಗಳು ಒಂದರಲ್ಲೇ ಯುಪಿಐ ಮೂಲಕ 2,366 ಕೋಟಿ ವಹಿವಾಟುಗಳ ನಡೆದು, 29.9 ಲಕ್ಷ ಕೋಟಿ ರೂ. ಮೊತ್ತದ ಪಾವತಿಯಾಗಿದೆ. ಪ್ರಸ್ತುತ ಯುಪಿಐ ಜಗತ್ತಿನ 11 ವಿದೇಶಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.








