Thursday, August 20, 2026
spot_imgspot_img
spot_imgspot_img

CAA ಅರ್ಜಿಗಳ ವಿಲೇವಾರಿಗೆ ವೇಗ: ಆರು ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾಧಿಕಾರಿಗಳಿಗೆ ಪೌರತ್ವ ಮಂಜೂರು ಅಧಿಕಾರ

- Advertisement -
- Advertisement -

ಹೊಸದಿಲ್ಲಿ: ಪಾಕಿಸ್ತಾನ,ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದರಲ್ಲಿ ವಿಳಂಬವನ್ನು ತಗ್ಗಿಸಲು ಕೇಂದ್ರ ಗೃಹ ಸಚಿವಾಲಯವು 2009ರ ಪೌರತ್ವ ನಿಯಮಗಳಿಗೆ ತಿದ್ದುಪಡಿ ತಂದಿದ್ದು ಪೌರತ್ವವನ್ನು ಮಂಜೂರು ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದೆ.

ಈ ತಿದ್ದುಪಡಿಯು ಪಂಜಾಬ್‌, ರಾಜಸ್ಥಾನ, ಗುಜರಾತ್, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾ (ಬುಡಕಟ್ಟು ಪ್ರದೇಶಗಳನ್ನು ಹೊರತುಪಡಿಸಿ) ಹಾಗೂ ಜಮ್ಮುಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಮಾನ್ಯ ವಾಸವನ್ನು ಹೊಂದಿರುವ ಸೂಕ್ತ ಮತ್ತು ಅರ್ಹ ಅರ್ಜಿದಾರರಿಗೆ ನೈಸರ್ಗಿಕ ಪೌರತ್ವ ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡುತ್ತದೆ.

ಗೃಹ ಸಚಿವಾಲಯವು ಈ ಸಂಬಂಧ ‘ಪೌರತ್ವ (ಮೂರನೇ ತಿದ್ದುಪಡಿ) ನಿಯಮಗಳು,2026’ ಅನ್ನು ಅಧಿಸೂಚಿಸಿದೆ. ಈ ಹೊಸ ನಿಯಮಗಳ ಅಡಿ ಪಂಜಾಬ್, ರಾಜಸ್ಥಾನ, ಗುಜರಾತ್ ಮತ್ತು ಇತರ ನಿರ್ದಿಷ್ಟ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಹಿಂದೂ, ಸಿಖ್, ಜೈನ, ಬೌದ್ಧ ಮತ್ತು ಪಾರ್ಸಿ ಅಲ್ಪಸಂಖ್ಯಾತರು ಪೌರತ್ವ ಕಾಯ್ದೆಯ ಸೆಕ್ಷನ್ 6ಬಿ ಅಡಿಯಲ್ಲಿ ಭಾರತೀಯ ಪೌರತ್ವ ಕೋರಿ ಸಲ್ಲಿಸುವ ನೋಂದಣಿ ಅಥವಾ ನೈಸರ್ಗಿಕೀಕರಣದ ಅರ್ಜಿಗಳನ್ನು ಸ್ವೀಕರಿಸಲು, ಪರಿಶೀಲಿಸಲು ಮತ್ತು ವಿಲೇವಾರಿ ಮಾಡಲು ಆಯಾ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಗೆ ಅಧಿಕಾರವಿರುತ್ತದೆ.

ಈವರೆಗೆ ಸಿಎಎ ಅಡಿ ಅಧಿಕಾರಯುತ ಸಮಿತಿಗಳು ಮತ್ತು ಜಿಲ್ಲಾ ಸಮಿತಿಗಳಿಗೆ ಪೌರತ್ವ ನೀಡುವ ಅಧಿಕಾರವಿತ್ತು. ಈ ಸಮಿತಿಗಳಲ್ಲಿ ಅಥವಾ ನಿರ್ದಿಷ್ಟ ಪ್ರದೇಶಗಳ ಜಿಲ್ಲಾಮಟ್ಟದ ಸಮಿತಿಗಳಲ್ಲಿ ಪ್ರಸ್ತುತ ಬಾಕಿಯಿರುವ ಎಲ್ಲ ಅರ್ಜಿಗಳನ್ನು ತಕ್ಷಣವೇ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸುವಂತೆ ಸರಕಾರವು ನಿರ್ದೇಶನ ನೀಡಿದೆ.

ಹೊಸ ನಿಯಮಗಳ ಪ್ರಕಾರ ಜಿಲ್ಲಾಧಿಕಾರಿಗಳು ನೋಂದಣಿ ಅಥವಾ ನೈಸರ್ಗಿಕೀಕರಣಕ್ಕಾಗಿ ಅರ್ಜಿಗಳನ್ನು ವಿದ್ಯುನ್ಮಾನ ವಿಧಾನದ ಮೂಲಕ ಸ್ವೀಕರಿಸಲು ಸಕ್ಷಮ ಅಧಿಕಾರಿಗಳಾಗಿರುತ್ತಾರೆ. ಅರ್ಜಿ ಸಲ್ಲಿಸಿದ ಬಳಿಕ ಸಿಸ್ಟಮ್ ಸ್ವಯಂಚಾಲಿತ ಸ್ವೀಕೃತಿಯನ್ನು ಸೃಷ್ಟಿಸುತ್ತದೆ. ಬಳಿಕ ಜಿಲ್ಲಾಧಿಕಾರಿಗಳು ಸಲ್ಲಿಸಲಾದ ಎಲ್ಲ ದಾಖಲೆಗಳನ್ನು ಪರಿಶೀಲಿಸುತ್ತಾರೆ ಮತ್ತು ಅರ್ಜಿದಾರರ ಸೂಕ್ತತೆಯನ್ನು ನಿರ್ಧರಿಸಲು ಅಗತ್ಯವಿರುವ ಯಾವುದೇ ವಿಚಾರಣೆ ನಡೆಸುತ್ತಾರೆ.

ಜಿಲ್ಲಾಧಿಕಾರಿಯವರು ಪೌರತ್ವ ಕಾಯ್ದೆಯ ಎರಡನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ನಿಷ್ಠೆಯ ಪ್ರಮಾಣ ವಚನವನ್ನೂ ಬೋಧಿಸುತ್ತಾರೆ ಮತ್ತು ಸೆಕ್ಷನ್ 6ಬಿ ಅಡಿ ಅರ್ಜಿದಾರರ ಅರ್ಹತೆಯನ್ನು ನಿರ್ಧರಿಸುತ್ತಾರೆ.

ಹೊಸ ನಿಯಮಗಳಡಿ ಅರ್ಜಿದಾರರು ಖುದ್ದಾಗಿ ಹಾಜರಾಗಬೇಕಾದ ಕಟ್ಟುನಿಟ್ಟಿನ ಅಗತ್ಯವನ್ನು ವಿಧಿಸಲಾಗಿದೆ. ಆದಾಗ್ಯೂಸೂಕ್ತ ಅವಕಾಶಗಳನ್ನು ನೀಡಿದ್ದರೂ ಅರ್ಜಿದಾರರು ಖುದ್ದಾಗಿ ಹಾಜರಾಗಿ ಅರ್ಜಿ ಸಲ್ಲಿಸಲು ಮತ್ತು ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸಲು ವಿಫಲವಾದರೆ ಜಿಲ್ಲಾಧಿಕಾರಿ ಅರ್ಜಿಯನ್ನು ತಿರಸ್ಕರಿಸುತ್ತಾರೆ ಎಂದು ಅಧಿಸೂಚನೆ ತಿಳಿಸಿದೆ.

- Advertisement -

Related news

error: Content is protected !!