
ಕರ್ನಾಟಕದ ಅತೀ ದೊಡ್ಡ ರಿಯಾಲಿಟಿ ಶೋ ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ -2026 ಶೋ ನಲ್ಲಿ ಮಂಗಳೂರಿನ ಲಿಟಿಲ್ ವಯಲಿನ್ ಚಾಂಪ್ ಅಶ್ಮಿತ್ ಎ ಜೆ ಮಂಗಳೂರು ಪ್ರಥಮ ಸ್ಥಾನದೊಂದಿಗೆ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.
ದ ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮೂಡಂಬೈಲ್ ರೇವತಿ ಜಯರಾಮ್ ದಂಪತಿಗಳ ಸುಪುತ್ರ ಅಶ್ಮಿತ್ ಎ ಜೆ ಯವರು ಪ್ರತೀ ವಾರ ಉತ್ತಮ ಹಾಡುಗಳನ್ನು ಹಾಡಿ ಜಡ್ಜಸ್ ಗಳಾದ ಖ್ಯಾತ ಗಾಯಕ ವಿಜಯ್ ಪ್ರಕಾಶ್, ಮೆಲೋಡಿ ಕಿಂಗ್ ರಾಜೇಶ್ ಕೃಷ್ಣ ಹಾಗೂ ಮ್ಯಾಜಿಕಲ್ ಮ್ಯೂಸಿಕ್ ಕಾಂಪೋಸರ್ ಅರ್ಜುನ್ ಜನ್ಯ ಇವರಿಂದ ಮೆಚ್ಚುಗೆ ಪಡೆದು “ಸ್ವರ ಪುತ್ರ” ಎಂಬ ಬಿರುದಿನೊಂದಿಗೆ ವಿಜಯ ಶಾಲಿಯಾಗಿದ್ದಾರೆ. ಅತೀ ಕಿರಿ ವಯಸ್ಸಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಗೈದಿರುವ ಇವರು ಮಂಗಳೂರಿನ ಸೈಂಟ್ ಗೋಂಝಗ ಶಾಲೆಯಲ್ಲಿ 8 ನೇ ತರಗತಿ ಅಭ್ಯಾಸ ಮಾಡುತ್ತಿದ್ದಾರೆ.
ಸಂಧ್ಯಾ ಸತ್ಯನಾರಾಯಣ ಭಟ್ ಇವರಿಂದ ಸಂಗೀತ ಅಭ್ಯಾಸ ಮಾಡುತ್ತಿರುವ ಇವರು ಜೊತೆಗೆ ವಯಲಿನ್ ತರಬೇತಿಯನ್ನು ವಿದ್ವಾನ್ ವೇಣುಗೋಪಾಲ್ ಶಾನ್ ಭೋಗ್ ಇವರಿಂದ ಪಡೆಯುತ್ತಿದ್ದಾರೆ. ಇದೀಗ ಮಂಗಳೂರಿನ ಹಿರಿಮೆಗೆ ಇನ್ನೊಂದು ಗರಿಮೆ ಎಂಬಂತೆ ಅಶ್ಮಿತ್ ಲಿಟಲ್ ಚಾಂಪ್ಸ್ ನ ವಿನ್ನರ್ ಆಗಿ ಮಿಂಚಿದ್ದು ಕರಾವಳಿಗೆ ಹೆಮ್ಮೆ ತಂದಿರುತ್ತಾರೆ.








