Monday, August 24, 2026
spot_imgspot_img
spot_imgspot_img

ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ ಗರ್ಭಿಣಿಯ ಪ್ರಾಣ ರಕ್ಷಣೆ: ಲೇಡಿಗೋಷನ್ ಆಸ್ಪತ್ರೆಯ ವೈದ್ಯರ ಸಾಧನೆ

- Advertisement -
- Advertisement -

ಮಂಗಳೂರು: ತಾಯಿ ಮಗುವಿನ ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಉನ್ನತ ಸೇವೆ ನೀಡುತ್ತಿರುವ ಮಂಗಳೂರಿನ ಸರಕಾರಿ ಲೇಡಿಗೋಷನ್‌ ಆಸ್ಪತ್ರೆ, ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ ಗರ್ಭಿಣಿಯೊಬ್ಬರ ಜೀವ ರಕ್ಷಣೆಯ ಮೂಲಕ ಮತ್ತೆ ಗಮನಸೆಳೆದಿದೆ.

ಗರ್ಭಾವಸ್ಥೆಯ ಕೆಲವೊಂದು ಕ್ಲಿಷ್ಟಕರ ಸನ್ನಿವೇಶದಲ್ಲಿ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸುವ ಸಂದರ್ಭದಲ್ಲಿ ಅನಿಯಂತ್ರಿತ ರಕ್ತಸ್ರಾವದಿಂದಾಗಿ ಗರ್ಭಿಣಿ, ತಾಯಿ ಮರಣ ಸಂಭವಿಸಿದ ಸಂದರ್ಭಗಳೇ ಹೆಚ್ಚು. ಇಂತಹದೇ ಪ್ರಕರಣದ ಹಿನ್ನೆಲೆಯ ಗರ್ಭಿಣಿಗೆ ಲೇಡಿಗೋಷನ್ ಆಸ್ಪತ್ರೆಯ ಮಲ್ಟಿ ಡಿಸಿಪ್ಲಿನರಿ ಅಪ್ರೋಚ್ ಮಾದರಿ ಜೀವರಕ್ಷಣೆ ಮಾಡಿದೆ.

ಏನಿದು ವಿಶೇಷ ಪ್ರಕರಣ?:

ಕಳೆದ ಎರಡು ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದ ಏಳು ತಿಂಗಳ ಗರ್ಭಿಣಿಯೊಬ್ಬರು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆದರೆ ಅಸಹಜ ಮತ್ತು ಅಕಾಲಿಕ ವೇದನೆಯ ಗಂಭೀರತೆಯನ್ನು ಅರಿತ ಖಾಸಗಿ ಆಸ್ಪತ್ರೆ ಅಸಹಾಯಕತೆ ವ್ಯಕ್ತಪಡಿಸಿ ಮಂಗಳೂರಿನ ಸರಕಾರಿ ಲೇಡಿಗೋಷನ್‌ ಆಸ್ಪತ್ರೆಗೆ ಗರ್ಭಿಣಿಯನ್ನು ಕಳುಹಿಸಿದ್ದಾರೆ. ಹೆರಿಗೆ ನೋವಿಗೆ ವ್ಯತಿರಿಕ್ತವಾದ ಈ ನೋವಿನ ಹಿನ್ನೆಲೆ ಮತ್ತು ಕಾರಣವನ್ನು ಅರಿಯುವ ನಿಟ್ಟಿನಲ್ಲಿ ಲೇಡಿಗೋಷನ್‌ ಆಸ್ಪತ್ರೆಯ ವೈದ್ಯರು ವಿವಿಧ ಪರೀಕ್ಷೆಗೆ ಒಳಪಡಿಸಿದಾಗ ಉದರದಲ್ಲಿ ರಕ್ತಸ್ರಾವವಾಗಿರುವುದು ಪತ್ತೆಯಾಗಿದೆ. ಈ ಮಧ್ಯೆ ಈ ರೋಗಿಯ ಹಿಮೋಗ್ಲೋಬಿನ್ ಅಂಶ ಕನಿಷ್ಠ ಆರು ಗ್ರಾಂಗಳಿಗೆ ಇಳಿದುದಲ್ಲದೆ, ರಕ್ತದಲ್ಲಿ ಆಮ್ಲಜನಕದ ಮಟ್ಟವೂ ತೀವ್ರವಾಗಿ ಕುಸಿಯಲಾರಂಭಿಸಿತ್ತು.

ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಮಹಿಳೆಯನ್ನು ಅತ್ತಾವರದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದು ಎಂ.ಆ‌ರ್.ಐ ಸ್ಕ್ಯಾನ್ ಮಾಡಿಸಿದಾಗ ತುರ್ತು ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿರುವುದು ಕಂಡುಬರುತ್ತದೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗೆ ಐಸಿಯು ಸೌಲಭ್ಯದ ಅಗತ್ಯವಿತ್ತು. ಆದರೆ ವೆನ್ಹಾಕ್ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಲಭ್ಯತೆ ಇಲ್ಲ ಎಂಬುದು ತಿಳಿದುಬರುತ್ತದೆ. ಆದರೆ ಎದೆಗುಂದದ ಲೇಡಿಗೋಷನ್‌ ವೈದ್ಯರ ತಂಡ ಮಹಿಳೆಗೆ ಚಿಕಿತ್ಸೆ ಮುಂದುವರಿಸುತ್ತದೆ.

ಗರ್ಭಿಣಿಯನ್ನು ತಜ್ಞ ವೈದ್ಯರು ತೀವ್ರ ತಪಾಸಣೆಗೆ ಒಳಪಡಿಸಿದಾಗ ಈ ಹಿಂದೆ ಸಿಸೇರಿಯನ್ ಹೆರಿಗೆ ಸಂದರ್ಭದ ಹಳೆಯ ಗಾಯದ ಭಾಗ ಒಡೆದು ಅಲ್ಲಿಂದ ರಕ್ತಸ್ರಾವವಾಗುತ್ತಿರುವುದು ಪತ್ತೆಯಾಗಿದೆ. ಅಲ್ಲದೇ, ಉದರದಲ್ಲಿ ಬೆಳೆಯುತ್ತಿರುವ ಗರ್ಭದ ಮಾಸು, ಪ್ಲಾಸೆಂಟಾ ಪರ್ಕ್ರೀಟಾ ಅನ್ನುವ ಗಂಡಾಂತರಕಾರಿ ಸಮಸ್ಯೆಯ ಎದುರಾಗಿತ್ತು. ಪ್ಲಾಸೆಂಟಾದ ಈ ಸ್ಥಿತಿಯಲ್ಲಿ ಶಿಶು ಹೊರಗೆ ಬರುವ ದಾರಿಗೆ ಅಡ್ಡಲಾಗಿರುವುದು ಮಾತ್ರವಲ್ಲ, ಅದಕ್ಕೆ ಸಂಬಂಧಿಸಿದ ರಕ್ತನಾಳಗಳು ಗರ್ಭಾಶಯವನ್ನು ಮೀರಿ ಹೊರಬಂದು ಮೂತ್ರಕೋಶವನ್ನು ಆಕ್ರಮಿಸಿತ್ತು.

ಇದು ತೀರಾ ಕ್ಲಿಷ್ಟಕರವಾದ ಆರೋಗ್ಯ ಸ್ಥಿತಿಯಾಗಿದ್ದು, ವೈದ್ಯ ಜಗತ್ತಿಗೆ ಸವಾಲಾಗಿ ಪರಿಣಮಿಸಿತ್ತು.ಇಂತಹ ಸಂದಿಗ್ಧ ಸನ್ನಿವೇಶವನ್ನು ಎದುರಿಸಲು ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್.ಎಂ.ಆರ್. ನಿರ್ದೇಶನದಲ್ಲಿ ಕಳೆದ ಒಂದೂವರೆ ವರ್ಷದಿಂದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಪಾಲಿಸುತ್ತಿರುವ ಮಲ್ಟಿ ಡಿಸಿಪ್ಲಿನರಿ ಅಪ್ರೋಚ್ ಮಾದರಿ ಸಹಾಯಕ್ಕೆ ಬಂತು.ಇದರಡಿ ಈ ಮಹಿಳೆಗೆ ಸ್ತ್ರೀ ರೋಗ ತಜ್ಞರ ಜೊತೆಯಲ್ಲಿ ಜನರಲ್ ಸರ್ಜನ್ ಹಾಗೂ ಸೂಪ‌ರ್ ಸ್ಪೆಶಾಲಿಟಿ ತಜ್ಞರು ಮತ್ತು ಅರಿವಳಿಕೆ ತಜ್ಞರ ತಂಡ ಪೂರ್ವ ಯೋಜನೆಯನ್ನು ಸಿದ್ಧಪಡಿಸಿ ಚಿಕಿತ್ಸೆ ಒದಗಿಸಿದ್ದಾರೆ.ಬೆಳಗ್ಗೆ ಸುಮಾರು ಐದು ಗಂಟೆಯಿಂದ ಒಂಭತ್ತು ಗಂಟೆಯ ವರೆಗೆ ಶಸ್ತ್ರಚಿಕಿತ್ಸೆ ನಡೆದು ರೋಗಿಯ ಪ್ರಾಣ ರಕ್ಷಣೆ ಮಾಡಲಾಯಿತು.

ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆ‌ರ್. ಮೇಲುಸ್ತುವಾರಿಯಲ್ಲಿ ವೈದ್ಯಾಧಿಕಾರಿ ಡಾ. ಜಗದೀಶ್ ಹಾಗೂ ಹಿರಿಯ ಪ್ರಸೂತಿ ತಜ್ಞ ಡಾ.ದಯಾನಂದ್‌ ಸಹಕಾರದಲ್ಲಿ ನಡೆದ ಈ ಚಿಕಿತ್ಸೆಯಲ್ಲಿ ಕೆಎಂಸಿ ಪ್ರಸೂತಿ ತಜ್ಞರಾದ ಡಾ.ಭಾರತಿ ಹಾಗೂ ಡಾ.ವಿನೀತಾ ಶೆಟ್ಟಿ, ಮೂತ್ರರೋಗ ತಜ್ಞ ಶಸ್ತ್ರಚಿಕಿತ್ಸಕರಾದ ಡಾ.ಸದಾನಂದ ಪೂಜಾರಿ ಮತ್ತು ಡಾ. ಪ್ರಮೋದ್, ಜನರಲ್ ಸರ್ಜನ್ ಡಾ.ಅಕ್ಷಿತ್, ಅರಿವಳಿಕೆ ತಜ್ಞರಾದ ಡಾ.ರಂಜನ್ ಹಾಗೂ ಡಾ.ರಕ್ಷಿತಾ ಸಹಕರಿಸಿದ್ದರು.ಶುಶೂಷಕ ತಂಡದಲ್ಲಿ ಜಲಜಾ, ಅಶ್ವಿನಿ, ವಿನೀತಾ, ರೇವತಿ, ಸಿಂಧೂ ಅವರ ನೆರವಿನೊಂದಿಗೆ ಬಡ ಹೆಣ್ಣು ಮಗಳ ಪ್ರಾಣ ಉಳಿಸಲು ಸಾಧ್ಯವಾಯಿತು ಎಂದು ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕ ಡಾ. ದುರ್ಗಾಪ್ರಸಾದ್.ಎಂ.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!