Tuesday, August 25, 2026
spot_imgspot_img
spot_imgspot_img

ಮೊಬೈಲ್ ಟವರ್ ಡೀಸೆಲ್ ಕಳವು ಪ್ರಕರಣ: ಮೂವರ ಬಂಧನ, ಠಾಣಾ ಜಾಮೀನಿನಲ್ಲಿ ಬಿಡುಗಡೆ

- Advertisement -
- Advertisement -

ಪುತ್ತೂರು: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮೈರೋಳ್ತಡ್ಕದಲ್ಲಿರುವ ಮೊಬೈಲ್ ಟವರ್‌ನ ಜನರೇಟರ್‌ನಿಂದ ಡೀಸೆಲ್ ಕಳವು ಮಾಡಲು ಯತ್ನಿಸಿದ ಆರೋಪದಡಿ ಧರ್ಮಸ್ಥಳ ಠಾಣಾ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಬಳಿಕ ಠಾಣಾ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ.


ಬಂದಾರು ಗ್ರಾಮದ ಮೈರೋಳ್ತಡ್ಕದಲ್ಲಿರುವ ಮೊಬೈಲ್ ಟವರ್‌ನ ಜನರೇಟರ್‌ನಿಂದ ಕಳೆದ ಕೆಲವು ದಿನಗಳಿಂದ ಡೀಸೆಲ್ ಕಳವು ಆಗುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಟವರ್ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯರು ಆ.23ರಂದು ರಾತ್ರಿ ಕಾವಲು ಕಾಯುತ್ತಿದ್ದರು.


ಈ ವೇಳೆ ಕಾರಿನಲ್ಲಿ ಬಂದ ಮೂವರು ಡೀಸೆಲ್ ಕಳವು ಮಾಡಲು ಯತ್ನಿಸುತ್ತಿದ್ದಾಗ ಅವರನ್ನು ಸ್ಥಳದಲ್ಲೇ ಹಿಡಿದು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.


ವಿಚಾರಣೆ ವೇಳೆ ಅವರು ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಕೋಡಿಯಡ್ಕ ನಿವಾಸಿ ದೀಕ್ಷನ್, ಕಠಾರ ನಿವಾಸಿ ವಿಖ್ಯಾತ್ ಹಾಗೂ ಕೊಡಪೊಟ್ಯ ನಿವಾಸಿ ಹೇಮಂತ್ ಎಂದು ತಿಳಿದುಬಂದಿದೆ.
ಇಂಡಸ್ ಮೊಬೈಲ್ ಟವರ್ ಸಂಸ್ಥೆಯ ಸೆಕ್ಯುರಿಟಿ ಸೂಪರ್‌ವೈಸರ್ ದಿನೇಶ್ ಕೆ. (53) ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ. 62/2026, ಕಲಂ 303(2) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


ಆ.23ರಂದು ರಾತ್ರಿ ಟವರ್ ಪರಿಶೀಲನೆ ನಡೆಸುತ್ತಿದ್ದ ವೇಳೆ ಮೂವರು ವ್ಯಕ್ತಿಗಳು ಎರಡು ಕ್ಯಾನ್‌ಗಳಲ್ಲಿ ಡೀಸೆಲ್ ತುಂಬಿಸುತ್ತಿರುವುದು ಕಂಡುಬಂದಿದ್ದು, ಸಿಬ್ಬಂದಿ ಸಮೀಪಕ್ಕೆ ತೆರಳುತ್ತಿದ್ದಂತೆ ಆರೋಪಿಗಳು KA 20 D 7442 ನೋಂದಣಿ ಸಂಖ್ಯೆಯ ಕಾರಿನಲ್ಲಿ ಡೀಸೆಲ್ ಕ್ಯಾನ್‌ಗಳೊಂದಿಗೆ ಪರಾರಿಯಾಗಿದ್ದರು. ಸುಮಾರು 60 ಲೀಟರ್, ₹6,000 ಮೌಲ್ಯದ ಡೀಸೆಲ್ ಕಳವು ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸಬಹುದಾದ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ದೀಕ್ಷನ್, ವಿಖ್ಯಾತ್ ಹಾಗೂ ಹೇಮಂತ್ ಅವರನ್ನು ಠಾಣಾ ಜಾಮೀನಿನಲ್ಲಿ ಬಿಡುಗಡೆಗೊಳಿಸಿ ನೋಟಿಸ್ ಜಾರಿಗೊಳಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!