Sunday, August 30, 2026
spot_imgspot_img
spot_imgspot_img

ಹಾಸನ: ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ; ಜಗಳ ಬಿಡಿಸಲು ಹೋದ ಸಿಬ್ಬಂದಿ ಮೇಲೆಯೇ ಹಲ್ಲೆ

- Advertisement -
- Advertisement -

ಹಾಸನ: ಜೈಲಿನೊಳಗೇ ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಜಗಳ ಬಿಡಿಸಲು ಹೋದ ಜೈಲು ಸಿಬ್ಬಂದಿ ಮೇಲೂ ಹಲ್ಲೆ ನಡೆಸಿರುವ ಘಟನೆ ಹಾಸನ ನಗರದ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

ಫೋನ್ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ವಿಚಾರಣಾಧೀನ ಕೈದಿಗಳಾದ ಮೋಹನಕುಮಾರ ಹಾಗೂ ರಂಗಸ್ವಾಮಿ ನಡುವೆ ಮೊದಲು ಫೋನ್ ಕರೆ ಮಾಡುವ ವಿಚಾರಕ್ಕೆ ಜಗಳ ಶುರುವಾಗಿದೆ. ಬಳಿಕ ಜಗಳ ತಾರಕಕ್ಕೇರಿ ಇಬ್ಬರೂ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಜೈಲು ಮುಖ್ಯ ವೀಕ್ಷಕರಾದ ಪರಶುರಾಮ ಹಾಗೂ ವೀರೇಶ್ ಸಂಗಮದ್ ಜಗಳ ಬಿಡಿಸಲು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ಪಿಸಿಎಸ್ ಕೊಠಡಿಯೊಳಗೆ ಏಕಾಏಕಿ ನುಗ್ಗಿದ ಒಂಭತ್ತು ಮಂದಿ ವಿಚಾರಣಾಧೀನ ಕೈದಿಗಳು ರಂಗಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ.

ಶಶಿಧರ, ರಾಕೇಶ, ಯಲ್ಲಾಲಿಂಗ, ಆಕಾಶ, ಉಮೇಶ, ಸಾಯಿನಾಥ, ನಿರೂಪ್, ಭರತ ಹಾಗೂ ಚೇತನ್ ಸೇರಿ ರಂಗಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ.

ಜಗಳ ಬಿಡಿಸಲು ಮುಂದಾದ ಜೈಲು ಸಿಬ್ಬಂದಿ ವೀರೇಶ್ ಸಂಗಮದ್, ಶಿವಕುಮಾರ ಹಾಗೂ ಪರಶುರಾಮ ಹೆಚ್. ಅವರ ಮೇಲೂ ಹಲ್ಲೆ ನಡೆದಿದೆ. ವೀರೇಶ್ ಸಂಗಮದ್ ಅವರನ್ನು ತಳ್ಳಿ ಕೆಳಗೆ ಬೀಳಿಸಿ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಜೈಲು ವೀಕ್ಷಕ ವೀರೇಶ್ ಸಂಗಮದ್ ಅವರು ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಹಲ್ಲೆ ನಡೆಸಿದ ಆರೋಪಿಗಳು ನಟೋರಿಯಸ್ ರೌಡಿಶೀಟರ್ ಮಂಜೇಶ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!