
ಮಂಗಳೂರು: ಶೈಕ್ಷಣಿಕ ಕ್ರಾಂತಿಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವತಿಯಿಂದ ನೋಟಿಸ್ ಜಾರಿಯಾಗಿದೆ.
2002ರ ಮತದಾರರ ಪಟ್ಟಿಯಲ್ಲಿ ಹರೇಕಳ ಹಾಜಬ್ಬ ಅವರ ಹೆಸರು ‘ಹಾಜಬ್ಬ’ ಎಂದು ಮಾತ್ರ ನಮೂದಾಗಿತ್ತು. ಆದರೆ ಪ್ರಸ್ತುತ ಅವರ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಹಾಗೂ ಮತದಾರರ ಗುರುತಿನ ಚೀಟಿಯಲ್ಲಿ ‘ಹರೇಕಳ ಹಾಜಬ್ಬ’ ಎಂದು ಹೆಸರು ದಾಖಲಾಗಿದೆ.
ಎಸ್‌ಐಆರ್ ಪ್ರಕ್ರಿಯೆ ವೇಳೆ ಹಳೆಯ ಮತದಾರರ ಪಟ್ಟಿಯಲ್ಲಿರುವ ಹೆಸರು ಮತ್ತು ಪ್ರಸ್ತುತ ದಾಖಲೆಗಳಲ್ಲಿರುವ ಹೆಸರಿನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿಯಾಗಿದೆ ಎಂದು ತಿಳಿದುಬಂದಿದೆ.
ಸೋಮವಾರ ಬೆಳಗ್ಗೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹಾಜಬ್ಬ ಅವರಿಗೆ ನೋಟಿಸ್ ನೀಡಿದ್ದು, ಸೆ.11ರಂದು ಶುಕ್ರವಾರ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯತ್‌ಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಿಗದಿತ ದಿನದಂದು ಗ್ರಾಮ ಪಂಚಾಯತ್‌ಗೆ ತೆರಳಿ ಅಗತ್ಯ ದಾಖಲೆಪತ್ರಗಳನ್ನು ಸಲ್ಲಿಸುವುದಾಗಿ ಹರೇಕಳ ಹಾಜಬ್ಬ ತಿಳಿಸಿದ್ದಾರೆ. ದಾಖಲೆಗಳನ್ನು ಸಲ್ಲಿಸಿದ ಬಳಿಕ ಉಂಟಾಗಿರುವ ಹೆಸರಿನ ವ್ಯತ್ಯಾಸದ ಸಮಸ್ಯೆಗೆ ಪರಿಹಾರ ದೊರೆಯುವ ವಿಶ್ವಾಸವಿದೆ ಎಂದಿದ್ದಾರೆ.








