




ಬಂಟ್ವಾಳ: ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಮಾಣಿ ಗ್ರಾಮದ ನರಸಿಂಹ ಶೆಟ್ಟಿ ಯಾನೆ ಮಾಣಿ ನರಸಿಂಹ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡುವ ಕುರಿತು ಮಂಗಳೂರು ಸಹಾಯಕ ಆಯುಕ್ತರ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಮಾಣಿ ಗ್ರಾಮದ ಕೋಡಿಮನೆ ನಿವಾಸಿ, ದಿ. ನಾರಾಯಣ ಶೆಟ್ಟಿ ಅವರ ಪುತ್ರ ನರಸಿಂಹ ಶೆಟ್ಟಿ ವಿರುದ್ಧ ವಿಟ್ಲ, ಪುತ್ತೂರು, ಬಂಟ್ವಾಳ ಹಾಗೂ ಮಂಗಳೂರು ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಕೊಲೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಕೋಮುಗಲಭೆಗೆ ಪ್ರಚೋದನೆ, ದ್ವೇಷ ಭಾಷಣ ಸೇರಿದಂತೆ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿರುವುದಾಗಿ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ನರಸಿಂಹ ಶೆಟ್ಟಿ ಅವರ ಚಟುವಟಿಕೆಗಳಿಂದ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55(ಎ) ಮತ್ತು (ಬಿ) ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲು ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಈ ಕುರಿತು ತಮ್ಮ ವಿವರಣೆಯೊಂದಿಗೆ ಸೆ.21ರಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರು ಸಹಾಯಕ ಆಯುಕ್ತರ ನ್ಯಾಯಾಲಯದ ಸಭಾಂಗಣದಲ್ಲಿ ಖುದ್ದಾಗಿ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ನಿಗದಿತ ದಿನಾಂಕದಂದು ಹಾಜರಾಗಿ ವಿವರಣೆ ನೀಡದಿದ್ದಲ್ಲಿ, ಯಾವುದೇ ವಿವರಣೆ ಇಲ್ಲವೆಂದು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನರಸಿಂಹ ಶೆಟ್ಟಿ ಯಾನೆ ಮಾಣಿ ನರಸಿಂಹ ವಿರುದ್ಧ 2003 ರಿಂದ 2026 ರವರೆಗೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ:
- ವಿಟ್ಲ – 89/2003 – 143,147,148,323,326,341,427,506(2) r/w 149 IPC
- ವಿಟ್ಲ – 112/2006 – 323,324,326,341 r/w 34 IPC
- ವಿಟ್ಲ – 83/2017 – 449,302,506,201,120(B),109,212 r/w 34 IPC (ಕೊಲೆ ಪ್ರಕರಣ)
- ವಿಟ್ಲ – 147/2021 – 143,147,353,149 IPC
- ಪುತ್ತೂರು ನಗರ – 57/2022 – 505(2) r/w 34 BNS (ದ್ವೇಷ ಭಾಷಣ)
- ಪುತ್ತೂರು ನಗರ – 29/2025 – 189(2),126(2),270,132,285,190 BNS
- ಮಂಗಳೂರು ಗ್ರಾಮಾಂತರ – 79/2025 – 196,192,353(2) BNS
- ಬಂಟ್ವಾಳ ನಗರ – 42/2025 – 196(1)(a), 353(1)(b) BNS (ಕೋಮು ದ್ವೇಷ)
- ಪುತ್ತೂರು ನಗರ – 51/2026 – 353(1)(b),353(2),240 BNS








