Monday, September 14, 2026
spot_imgspot_img
spot_imgspot_img

ಎರಡು ಕೇಂದ್ರಗಳಿಂದ 228 ಟನ್ ಗೋಧಿ ಮಾಯ; ₹60 ಲಕ್ಷ ಅವ್ಯವಹಾರ ಶಂಕೆ

- Advertisement -
- Advertisement -

ಲಕ್ಕೊ: 228.764 ಮೆಟ್ರಿಕ್ ಟನ್ ತೂಕ ಹಾಗೂ ಸುಮಾರು 60 ಲಕ್ಷ ರೂ. ಮೌಲ್ಯದ ಸರಕಾರಿ ಗೋಧಿ ಸಂಗ್ರಹ ಉತ್ತರ ಪ್ರದೇಶದ ಬಲರಾಂಪು‌ರ್ ಜಿಲ್ಲೆಯ ಪ್ರಾಂತೀಯ ಸಹಕಾರ ಒಕ್ಕೂಟದ ಎರಡು ಖರೀದಿ ಕೇಂದ್ರಗಳಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಖರೀದಿ ಕೇಂದ್ರದ ಮೇಲ್ವಿಚಾರಕ ಸೇರಿದಂತೆ ಇಬ್ಬರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸೆಪ್ಟೆಂಬರ್ 11ರಂದು ತುಳಸೀಪುರ್ ನ ಎರಡು ಬಿ-ಪ್ಯಾಕ್ಸ್ ಖರೀದಿ ಕೇಂದ್ರಗಳಲ್ಲಿ ದಿಢೀ‌ರ್ ತಪಾಸಣೆ ನಡೆಸಿದಾಗ, ಗೋಧಿ ಸಂಗ್ರಹ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಜಿಲ್ಲಾ ಆಹಾರ ಮತ್ತು ಮಾರುಕಟ್ಟೆ ಅಧಿಕಾರಿ ಗೋವಿಂದ್ ಕುಮಾರ್ ಉಪಾಧ್ಯಾಯ್, ಸಹಾಯಕ ಆಯುಕ್ತ (ಸಹಕಾರ) ಅಜಯ್ ಕುಮಾ‌ರ್ ಮೌರ್ಯ ಹಾಗೂ ಹೆಚ್ಚುವರಿ ಜಿಲ್ಲಾ ಸಹಕಾರ ಅಧಿಕಾರಿ ದೇವೇಂದ್ರ ಪ್ರತಾಪ್‌ ಅಗ್ರಹಾರಿ ನೇತೃತ್ವದಲ್ಲಿ ಈ ಜಂಟಿ ಕಾರ್ಯಾಚರಣೆ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ತಪಾಸಣೆಯ ವೇಳೆ, ಒಂದು ಕೇಂದ್ರದಲ್ಲಿ 2026-27ನೇ ಸಾಲಿನಲ್ಲಿ 420.87 ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಲಾಗಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿತ್ತು. ಈ ಪೈಕಿ 353.759 ಮೆಟ್ರಿಕ್ ಟನ್ ಗೋಧಿಯನ್ನು ಭಾರತೀಯ ಆಹಾರ ನಿಗಮಕ್ಕೆ ಸರಬರಾಜು ಮಾಡಲಾಗಿತ್ತು. ಉಳಿದ 67.111 ಮೆಟ್ರಿಕ್ ಟನ್ ಗೋಧಿಯನ್ನು ದಾಸ್ತಾನಿನಲ್ಲಿ ಶೇಖರಿಸಿಡಬೇಕಾಗಿತ್ತು. ಆದರೆ, ತಪಾಸಣೆಗೆ ಬಂದ ತಂಡಕ್ಕೆ ಗೋದಾಮಿನ ಕೀಲಿಕೈ ಅನ್ನು ನೀಡಲು ನಿರಾಕರಿಸಲಾಯಿತು. ಕಿಟಕಿಯ ಮೂಲಕ ನೋಡಿದಾಗ, ಗೋದಾಮು ಖಾಲಿ ಇರುವುದು ಕಂಡು ಬಂದಿತು ಎಂದು ಪೊಲೀಸರು ಹೇಳಿದ್ದಾರೆ.

ಎರಡನೆಯ ಕೇಂದ್ರದಲ್ಲಿ 322.600 ಮೆಟ್ರಿಕ್ ಟನ್‌ ಗೋಧಿಯನ್ನು ಖರೀದಿಸಲಾಗಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿತ್ತು. ಈ ಪೈಕಿ 160.947 ಮೆಟ್ರಿಕ್ ಟನ್ ಗೋಧಿಯನ್ನು ಭಾರತೀಯ ಆಹಾರ ನಿಗಮಕ್ಕೆ ಸರಬರಾಜು ಮಾಡಲಾಗಿತ್ತು. ಉಳಿದ 161.653 ಮೆಟ್ರಿಕ್ ಟನ್ ಗೋಧಿಯನ್ನು ಗೋದಾಮಿನಲ್ಲಿ ಶೇಖರಿಸಿಡಬೇಕಿತ್ತು. ಆದರೆ, ಗೋದಾಮಿನಲ್ಲಿ ಯಾವುದೇ ಭೌತಿಕ ಸಂಗ್ರಹ ಕಂಡು ಬರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರತಿ ಕ್ವಿಂಟಾಲ್ ಗೆ 2,605 ರೂ. ಬೆಂಬಲ ಬೆಲೆಯ ಆಧಾರದಲ್ಲಿ ನಾಪತ್ತೆಯಾಗಿರುವ ಗೋಧಿ ಸಂಗ್ರಹದ ಮೌಲ್ಯ ಸುಮಾರು 60 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಪ್ರಾಂತೀಯ ಸಹಕಾರ ಒಕ್ಕೂಟದ ಜಿಲ್ಲಾ ವ್ಯವಸ್ಥಾಪಕ ಅಶ್ವಿನಿ ಶುಕ್ಲಾ ಅವರು ಉಸ್ತುವಾರಿ ಕಾರ್ಯದರ್ಶಿ ಪ್ರಕಾಶ್ ಸಿಂಗ್ ಹಾಗೂ ಕೇಂದ್ರದ ಮೇಲ್ವಿಚಾರಕ ಮಹೇಂದ್ರ ಮಣಿ ತಿವಾರಿ ವಿರುದ್ಧ ನೀಡಿದ ದೂರನ್ನು ಆಧರಿಸಿ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಮಾರ್ತಾಂಡ್ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ. ಈ ಸಂಬಂಧ ಪ್ರಕಾಶ್ ಸಿಂಗ್ ರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

- Advertisement -

Related news

error: Content is protected !!