ತ್ರಿಕಾಲ ನಾಮಸ್ಮರಣೆ ಎಲ್ಲಾ ಶತ್ರುಗಳನ್ನು ನಿರ್ನಾಮಗೊಳಿಸುವುದು; ಯಾರ ಜೊತೆಗೆ ನೀನು ಸೇರುವುದೋ, ಅದೇ ರೀತಿ ಆಗುವುದು: ಡಾ. ವಿಜಯಸರಸ್ವತಿ





ಅಳಿಕೆ: ಜ್ಞಾನ ಏನು ಮಾಡುತ್ತೀಯ ಎಂದು ಹೇಳಿದರೆ, ಮೌಲ್ಯಗಳು ಏನು ಮಾಡಬೇಕು ಎಂದು ಹೇಳುತ್ತವೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ಉದಯಪ್ರಕಾಶ ಮುಳಿಯ ಅಭಿಪ್ರಾಯಪಟ್ಟರು.
ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳಲ್ಲಿ ನಡೆದ ವಿದ್ಯಾಗಣಪತಿ ಮಹೋತ್ಸವದ ಮೊದಲ ದಿನದ ಅಪರಾಹ್ನದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗತ್ತಿನಲ್ಲಿ ಎಲ್ಲಿ ಹೋದರೂ ಬದುಕಬಲ್ಲ ಧೈರ್ಯ ಕೊಡುವಂತಹದ್ದು ಅಳಿಕೆ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಸಿಗುತ್ತದೆ ಎಂದರು.
ಇನ್ನೋರ್ವ ಅತಿಥಿ ಡಾ. ವಿಜಯಸರಸ್ವತಿ ಮಾತನಾಡಿ, ತ್ರಿಕಾಲ ನಾಮಸ್ಮರಣೆ ಎಲ್ಲಾ ಶತ್ರುಗಳನ್ನು ನಿರ್ನಾಮಗೊಳಿಸುತ್ತದೆ. ಯಾರ ಜೊತೆಗೆ ನೀನು ಸೇರುತ್ತೀಯೋ ಅದೇ ರೀತಿ ಆಗುತ್ತೀಯ ಎಂದು ಹೇಳಿದರು. ಯಾವುದೇ ಕೈಂಕರ್ಯ ಮಾಡಲು ಯೋಗ ಹಾಗೂ ಯೋಗ್ಯತೆ ಅಗತ್ಯವಿದ್ದು, ಯಾವುದೇ ಆಚರಣೆಗಳು ನಮ್ಮಲ್ಲಿ ಅಂತಃಪ್ರಜ್ಞೆಯನ್ನು ಬೆಳೆಸಬೇಕು ಎಂದು ವ್ಯಾಖ್ಯಾನಿಸಿದರು.
ಪೂರ್ವಾಹ್ನ ಮೂರ್ತಿ ಪ್ರತಿಷ್ಠಾಪನೆ, ಗಣಹೋಮ, ಪೂಜಾರಾಧನೆ, ಭಜನೆಯೊಂದಿಗೆ ಪಿಯು ಕಾಲೇಜಿನ ಪ್ರಾರ್ಥನಾ ಮಂದಿರದಲ್ಲಿ ಕಾರ್ಯಕ್ರಮ ಆರಂಭಗೊಂಡಿತು. ವಿದ್ಯಾರ್ಥಿಗಳಾದ ಚಿರಂತನ ಬಿ.ಎಂ., ಸುಹಾಸ್ ಸುಮಧುರ್ ಗಣಪತಿಯ ಮಹತ್ವದ ಬಗ್ಗೆ ಮಾತನಾಡಿದರು. ಸೌರವ್ ಬಿ.ಪಿ. ಹಾಡನ್ನು ಹಾಡಿದರು.
ಸಂಸ್ಥೆಗಳ ಸಂಚಾಲಕರು ಹಾಗೂ ಟ್ರಸ್ಟಿನ ಕಾರ್ಯದರ್ಶಿ ಚಂದ್ರಶೇಖರ ಭಟ್ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮಲ್ಲಿನ ವಿದ್ಯಾಗಣಪತಿ ವಿದ್ಯಾರ್ಥಿ ಗಣಪತಿ ಎಂದರು. ವೇದಿಕೆಯಲ್ಲಿ ಕೆ.ಎಸ್. ಕೃಷ್ಣ ಭಟ್ ಉಪಸ್ಥಿತರಿದ್ದರು.
ಗಣಿತ ಉಪನ್ಯಾಸಕ ಅನಂತಪ್ರಸಾದ್ ಬಿ. ಸ್ವಾಗತಿಸಿದರು. ಟ್ರಸ್ಟಿನ ಆಡಳಿತಾಧಿಕಾರಿ ಜನಾರ್ದನ ನಾಯಕ್ ಎಸ್. ವಂದಿಸಿದರು. ಸಮಾಜಶಾಸ್ತ್ರ ಉಪನ್ಯಾಸಕ ಉದಯ ನಾಯ್ಕ ನಿರೂಪಿಸಿದರು.








