


ನವದೆಹಲಿ: ಸಂಚಾರ ಕಾನೂನು ಉಲ್ಲಂಘಿಸುವವರು ದಂಡ ಪಾವತಿಸುವಂತೆ ಮಾಡಲು ಸರ್ಕಾರವು ನವೀನ ವಿಧಾನವನ್ನು ಅಳವಡಿಸಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಜನರು ಟ್ರಾಫಿಕ್ ಚಲನ್ ದಂಡವನ್ನು ಪಾವತಿಸದಿದ್ದರೆ, ಅದನ್ನು ಅವರ ವಿದ್ಯುತ್ ಬಿಲ್ ಜೊತೆ ಲಿಂಕ್ ಮಾಡಿ ಎಂದು ಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಪೀಠವು, ದಂಡದ ಮೊತ್ತವನ್ನು ಪಾವತಿಸದ ವಾಹನಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಹಾಗೂ ಅವುಗಳ ಮಾಲೀಕತ್ವದ ವರ್ಗಾವಣೆಯನ್ನು ತಡೆಯಲು ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸಲಹೆ ನೀಡಿತು.
ಜನರು ಟ್ರಾಫಿಕ್ ಫೈನ್ ಕಟ್ಟದಿದ್ದರೆ, ಅದನ್ನು ಅವರ ವಿದ್ಯುತ್ ಬಿಲ್‌ಗೆ ಲಿಂಕ್ ಮಾಡಿ. ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಭಯದಿಂದ ಅವರು ಬಿಲ್ ಪಾವತಿಸಲೇಬೇಕಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.
ಕೇವಲ ಇ-ಚಲನ್‌ಗಳನ್ನು ವಿತರಿಸುತ್ತಾ ಹೋದರೆ ಸಾಲದು. ಪೊಲೀಸರು ಇಂತಹ ಸಾವಿರಾರು ಅಥವಾ ಲಕ್ಷಾಂತರ ಇ-ಚಲನ್‌ಗಳನ್ನು ವಿತರಿಸಬಹುದು. ಆದರೆ, ಆ ಚಲನ್‌ಗಳ ಮೂಲಕ ವಿಧಿಸಲಾದ ದಂಡದ ಮೊತ್ತವನ್ನು ವಸೂಲಿ ಮಾಡುವುದು ಮುಖ್ಯ ಪ್ರಶ್ನೆಯಾಗಿದೆ.
ಜನರು ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ಪಾವತಿಸದಿದ್ದರೆ, ಆ ಮೊತ್ತವನ್ನು ಅವರ ವಿದ್ಯುತ್ ಬಿಲ್‌ನ ಬಾಕಿಗೆ ಸೇರಿಸಿ. ಅವರು ವಿದ್ಯುತ್ ಬಿಲ್ ಪಾವತಿಸಲೇಬೇಕಾಗುತ್ತದೆ, ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಇದಕ್ಕೆ ಸೂಕ್ತ ಮಾರ್ಗವನ್ನು ಕಂಡುಕೊಳ್ಳಿ. ಈ ದೇಶದಲ್ಲಿ, ನೀವು ಇದಕ್ಕೆ ಪರಿಹಾರವೊಂದನ್ನು ಹುಡುಕಲೇಬೇಕು ಎಂದು ನ್ಯಾಯಪೀಠ ಹೇಳಿದೆ.
ದೇಶಾದ್ಯಂತ ಒಟ್ಟು 45,000 ಕೋಟಿ ರೂ. ಮೌಲ್ಯದ ಇ-ಚಲನ್‌ಗಳಲ್ಲಿ ಇದುವರೆಗೆ 25,000 ಕೋಟಿ ರೂ. ಮಾತ್ರ ವಸೂಲಾಗಿದ್ದು, ಇನ್ನೂ 20,000 ಕೋಟಿ ದಂಡದ ಮೊತ್ತ ವಸೂಲಿ ಬಾಕಿ ಇದೆ ಎಂದು ವರದಿಯಿಂದ ತಿಳಿದುಬಂದಿದೆ.








