Tuesday, September 29, 2026
spot_imgspot_img
spot_imgspot_img

ಪುತ್ತೂರಿನಲ್ಲಿ ಭಕ್ತರ ದೇಣಿಗೆ ದುರ್ಬಳಕೆ ಆರೋಪ – ಬಿಜೆಪಿಯಿಂದ ಬೃಹತ್ ಪ್ರತಿಭಟನೆ

- Advertisement -
- Advertisement -

ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯಿಂದ ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆದಿದ್ದು, ಸಮಿತಿಯು ಭಕ್ತರ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದೆ. ತಕ್ಷಣವೇ ಈ ಬಗ್ಗೆ ಸಮಗ್ರವಾದ ನ್ಯಾಯಾಂಗ ತನಿಖೆ ನಡೆಸಿ ತಪ್ಪತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಕಾನೂನು ಚಳವಳಿ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯ ಮುರಳೀಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದರು.

ಅವರು ಭಾರತೀಯ ಜನತಾ ಪಕ್ಷ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ರಾಜಕೀಯ ಹಸ್ತಕ್ಷೇಪವನ್ನು ವಿರೋಧಿಸಿ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿಯಲ್ಲಿ ಮಂಗಳವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಅವ್ಯವಹಾರ ಮತ್ತು ರಾಜಕೀಯ ಹಸ್ತಕ್ಷೇಪ ನಡೆಯುತ್ತಿರುವ ಬಗ್ಗೆ ಹಲವು ದೂರುಗಳು ಭಕ್ತರಿಂದ ಕೇಳಿ ಬಂದಿದ್ದರೂ ದೇವರ ಹೆಸರನ್ನು ರಸ್ತೆಗೆ ತರಬಾರದು ಎಂಬ ನಿಟ್ಟಿನಲ್ಲಿ ನಾವು ಸುಮ್ಮನಾಗಿದ್ದೆವು. ಆದರೆ ದೇವಳದ ವ್ಯವಸ್ಥಾಪನಾ ಸಮಿತಿಯು ದೇವಳದ ಲೆಕ್ಕಪತ್ರದಲ್ಲಿ ಪಾರದರ್ಶಕತೆ ಮಾಡದೆ ಭಕ್ತರಿಗೆ ಅನ್ಯಾಯ ಎಸಗಿರುವುದರಿಂದ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ದೇವಳದ ಕಾಮಗಾರಿ ನಡೆಸಿದ ಬಗ್ಗೆ ಸಮಿತಿ ಸದಸ್ಯರೊಬ್ಬರ ಹೆಸರಿಗೆ ರೂ. 70 ಲಕ್ಷ ನೀಡಲಾಗಿದೆ. ಅಲ್ಲದೆ ಸಣ್ಣಪುಟ್ಟ ಖರ್ಚುಗಳ ಹೆಸರಿನಲ್ಲಿ ತಿಂಗಳಿಗೆ ರೂ. 14 ಲಕ್ಷ ಬಳಸಿ ಅವ್ಯವಹಾರ ನಡೆಸಲಾಗಿದೆ. ಅಲ್ಲದೆ ಭಕ್ತರ ದೇಣಿಗೆಯಿಂದ ನಿರ್ಮಿಸಲಾಗಿದ್ದ ಅಯ್ಯಪ್ಪ ಗುಡಿ, ನಾಗನ ಕಟ್ಟೆ, ನಟರಾಜ ವೇದಿಕೆಯ ಕಟ್ಟಡವನ್ನು ಧ್ವಂಸ ಮಾಡಿ. ಈ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದರೂ ಇಲಾಖೆ ಮೌನವಾಗಿದೆ ಎಂದು ಆರೋಪಿಸಿದರು.

ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯವನ್ನು ಶಾಸಕ ಅಶೋಕ್ ರೈ ಅವರು ಪ್ರವಾಸಿ ಕೇಂದ್ರವಾಗಿಸಲು ಹೊರಟಿದ್ದಾರೆ. ದೇವಳವು ಹಿಂದೂಗಳ ಪಾರಂಪರಿಕ ಕ್ಷೇತ್ರವಾಗಿದ್ದು, ಇದೊಂದು ಪ್ರವಾಸಿ ಕೇಂದ್ರವಲ್ಲ. ಶಾಸಕರು ಧಾರ್ಮಿಕ ಕ್ಷೇತ್ರವನ್ನು ರಾಜಕೀಯ ಕ್ಷೇತ್ರವಾಗಿ ಬಳಕೆ ಮಾಡಲು ಮುಂದಾಗಿದ್ದಾರೆ. 2028ರ ಚುನಾವಣೆಯನ್ನು ಗುರಿಯಾಗಿರಿಸಿ ಶಾಸಕರು ದೇವಳದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಧ್ವಂಸ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.

ದೇವಳದ ಅನ್ನಛತ್ರವನ್ನು ಹಿಂದಿನ ಅಧ್ಯಕ್ಷರು ನಿರ್ಮಿಸಿದ್ದರು. ಹಿಂದಿನ ಪುಡಾ ಅಧ್ಯಕ್ಷರ ಒತ್ತಾಸೆಯಂತೆ ದೇವಳದ ಪುಷ್ಕರಿಣಿ ದುರಸ್ತಿಗೆ ಪುಡಾದಿಂದ ರೂ. 35 ಲಕ್ಷ ಅನುದಾನ ಹಾಗೂ ರೂ. 54 ಲಕ್ಷ ಜನರ ಹಣ ಮಂಜೂರುಗೊಳಿಸಲಾಗಿತ್ತುಆದರೆ ಈ ಕಾಮಗಾರಿ ಅರ್ಧದಲ್ಲಿ ನಿಂತಿದೆ. ಈ ಎಲ್ಲಾ ಅವ್ಯವಸ್ಥೆಗೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು ದೇವಳದ ಅವ್ಯವಹಾರಗಳ ಬಗ್ಗೆ ಪ್ರಶ್ನಿಸಿದ ಶ್ರೀ ಮಹಾಲಿಂಗೇಶ್ವರ ಸಂರಕ್ಷಣಾ ಸಮಿತಿಯವರನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಚರಂಡಿಯಲ್ಲಿ ನಿಂತು ಮಾತನಾಡುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಹಿಂದಿನ ತಹಸೀಲ್ದಾ‌ರ್ ಕೋಚಣ್ಣ ರೈ ಅವರು ಆ ಸಮಯದಲ್ಲಿ ದೇವಳಕ್ಕಾಗಿ 18 ಎಕ್ರೆ ಜಾಗವನ್ನು ಖರೀದಿಸಿ ಒದಗಿಸಿದ್ದರು. ಆ ಜಾಗದಲ್ಲಿ ಇದೀಗ ವ್ಯವಸ್ಥಾಪನಾ ಸಮಿತಿಯು ಬೈಪಾಸ್ ರಸ್ತೆ ಮಾಡಲು ಮುಂದಾಗಿದೆ. ದೃವಳಕ್ಕೆ ಸುತ್ತಲೂ 7 ಸಂಪರ್ಕ ರಸ್ತೆಗಳಿವೆ. ಇನ್ನೊಂದು ರಸ್ತೆ ನಿರ್ಮಾಣ ಮಾಡುವ ಅಗತ್ಯವಿದೆಯೇ ಎಂಬ ಭಕ್ತರ ಪ್ರಶ್ನೆಗೆ ಸಮಿತಿಯು ಉತ್ತರ ಕೊಡುತ್ತಿಲ್ಲ. ಈ ಎಲ್ಲಾ ಅವ್ಯವಹಾರ ಮತ್ತು ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿಜೆಪಿ ಗ್ರಾಮಾಂತರ ಮಂಡಲ ಕಾರ್ಯದರ್ಶಿ ಲೋಕೇಶ್ ಚಾಕೊಟೆ ಮನವಿ ಪತ್ರ ವಾಚಿಸಿದರು. ಪ್ರತಿಭಟನಾ ಸಭೆಯ ಬಳಿಕ ಪುತ್ತೂರು ಉಪವಿಭಾಗದ ಸಹಾಯಕ ಆಯಕ್ತರಿಗೆ ಮನವಿ ಸಲ್ಲಿಸಿದರು.
ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾ‌ರ್ ಕಲ್ಲಿಮಾರ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು, ಉಪಸ್ಥಿತರಿದ್ದರು.

- Advertisement -

Related news

error: Content is protected !!