ಮಂಗಳೂರು: ಅ.10: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಮೀಸಲಾತಿಗೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2023ರ ಮೀಸಲಾತಿ ನಿಯಮಗಳ ಅನ್ವಯ ಕ್ಷೇತ್ರವಾರು ಮೀಸಲಾತಿ ನಿಗದಿಪಡಿಸಿ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ.ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 162ರಡಿ ಈ ಅಧಿಸೂಚನೆ ಹೊರಡಿಸಲಾಗಿದೆ.

ಹಿಂದಿನ ಅಧಿಸೂಚನೆಗಳನ್ನು ರದ್ದುಪಡಿಸಿ ಹೊಸದಾಗಿ ಮೀಸಲಾತಿ ಪ್ರಕಟಿಸಲಾಗಿದ್ದು, ವಿವಿಧ ಕ್ಷೇತ್ರಗಳನ್ನು ಸಾಮಾನ್ಯ, ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ‘ಎ’, ಹಿಂದುಳಿದ ವರ್ಗ ‘ಬಿ’, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಿಡಲಾಗಿದೆ.ಪ್ರಮುಖ ಕ್ಷೇತ್ರಗಳ ಮೀಸಲಾತಿಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಹಳೆಯಂಗಡಿ, ಬೆಳುವಾಯಿ, 62ನೇ ತೋಕೂರು, ತೆಂಕ ಎಡಪದವು, ಮೂಡುಶೆಡ್ಡೆ, ಮುನ್ನೂರು, ಕೋಣಾಜೆ, ಮಂಜನಾಡಿ, ಸರಪಾಡಿ, ಸಜಿಪಮುನ್ನೂರು, ಗೋಳ್ತಮಜಲು, ಪುಣಚ, ಪುದು, ನಾರಾವಿ, ಅಳದಂಗಡಿ, ಧರ್ಮಸ್ಥಳ, ಕಣಿಯೂರು, ಉಪ್ಪಿನಂಗಡಿ ಹಾಗೂ ಆರ್ಯಾಪು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ.ಇದೇ ವೇಳೆ ಮುಲ್ಕಿ, ಮೂಡುಬಿದಿರೆ, ಮಂಗಳೂರು ಹಾಗೂ ಉಳ್ಳಾಲ ತಾಲೂಕು ಪಂಚಾಯಿತಿಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಗೂ ಮೀಸಲಾತಿ ಪ್ರಕಟಿಸಲಾಗಿದೆ. ಮಹಿಳೆಯರಿಗೆ ಸಾಮಾನ್ಯ ವರ್ಗ ಸೇರಿದಂತೆ ಹಿಂದುಳಿದ ವರ್ಗ ‘ಎ’, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಡಿಯಲ್ಲಿ ಮೀಸಲಾತಿ ಕಲ್ಪಿಸಲಾಗಿದೆ.ಅ.19ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶಕರಡು ಅಧಿಸೂಚನೆ ಕುರಿತು ಆಕ್ಷೇಪಣೆಗಳಿದ್ದಲ್ಲಿ, ಪೂರಕ ದಾಖಲೆಗಳೊಂದಿಗೆ ಅ.19, 2026ರ ಸೋಮವಾರ ಸಂಜೆ 5 ಗಂಟೆಯೊಳಗೆ ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿದೆ.




ಆಕ್ಷೇಪಣೆಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸರ್ಕಾರದ ಕಾರ್ಯದರ್ಶಿ (ಪಂಚಾಯತ್ ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿ ಕಟ್ಟಡ, 3ನೇ ಹಂತ, 3ನೇ ಮಹಡಿ, ಡಾ. ಅಂಬೇಡ್ಕರ್ ವೀದಿ, ಬೆಂಗಳೂರು–560001 ವಿಳಾಸಕ್ಕೆ ತಲುಪಿಸಬೇಕು.
ನಿಗದಿತ ಕೊನೆಯ ದಿನಾಂಕದ ನಂತರ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಅಂಚೆ ಮೂಲಕ ಆಕ್ಷೇಪಣೆಗಳು ತಲುಪುವಲ್ಲಿ ಉಂಟಾಗುವ ವಿಳಂಬಕ್ಕೆ ಇಲಾಖೆಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.








