Saturday, October 17, 2026
spot_imgspot_img
spot_imgspot_img

ಮಕ್ಕಳೂ ಸೇರಿದಂತೆ ಪ್ರತಿಯೊಬ್ಬರಿಗೂ ಇಂಟರ್ನೆಟ್ ಬಳಕೆ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್‌

- Advertisement -
- Advertisement -

ನವದೆಹಲಿ: ಇಂಟರ್ನೆಟ್‌ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಸಂವಿಧಾನದ ವಿಧಿ 21 ಮತ್ತು 19(1)(ಎ) ಅಡಿಯಲ್ಲಿ, ಇಂಟರ್ನೆಟ್‌ ಪ್ರವೇಶಿಸುವುದು ಮತ್ತು ಬಳಸುವುದು ಒಂದು ಮೂಲಭೂತ ಹಕ್ಕು ಎಂದು ಕೋರ್ಟ್‌ ಘೋಷಿಸಿದೆ. ಮಕ್ಕಳಿಗೂ ಇದೇ ಹಕ್ಕಿನ ರಕ್ಷಣೆ ಲಭ್ಯವಿದ್ದು, ಅವರಿಂದ ಈ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

`ಸುರಕ್ಷತೆಯ ಹಿತದೃಷ್ಟಿಯಿಂದ ಮಕ್ಕಳನ್ನು ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣವಾಗಿ ದೂರವಿಡಬೇಕೇ?ʼ ಎನ್ನುವ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದೆ.

ಇಂಟರ್ನೆಟ್‌ ಬಳಕೆಯನ್ನು ಮಕ್ಕಳಿಗೆ ಸಂಪೂರ್ಣವಾಗಿ ನಿರಾಕರಿಸುವುದು, ಅವರಿಗೆ ರಕ್ಷಿಸಬೇಕಾದ ವಿವೇಕವಿಲ್ಲ ಅಥವಾ ವ್ಯಕ್ತಪಡಿಸಬೇಕಾದ ವಾಕ್‌ಸ್ವಾತಂತ್ರ್ಯವಿಲ್ಲ ಎಂದು ಹೇಳಿದಂತೆಯೇ ಆಗುತ್ತದೆ. ಮಕ್ಕಳ ಸುರಕ್ಷತೆ ಮತ್ತು ಅವರ ಸ್ವಾತಂತ್ರ್ಯ ಪರಸ್ಪರ ವಿರುದ್ಧವಾದವುಗಳಲ್ಲ. ನಮ್ಮ ಮಕ್ಕಳು ಈ ಎರಡೂ ಹಕ್ಕುಗಳಿಗೆ ಅರ್ಹರಾಗಿದ್ದಾರೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿ ಬರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಲ್ಲಿ, ವಿಷಯಗಳನ್ನು ತಿಳಿದುಕೊಳ್ಳುವ, ಮಾಹಿತಿ ಪಡೆಯುವ ಹಾಗೂ ವಿಚಾರಗಳನ್ನು ಹಂಚಿಕೊಳ್ಳುವ ಹಕ್ಕುಗಳೂ ಸೇರಿವೆ ಎಂದು ಕೋರ್ಟ್‌ ಗಮನಸೆಳೆಯಿತು. ಇಂಟರ್ನೆಟ್ ಅನ್ನು ವಿಚಾರಗಳು, ಸೃಜನಶೀಲ ಅಭಿವ್ಯಕ್ತಿ ಮತ್ತು ಮಾಹಿತಿಯ ಒಂದು ವೇದಿಕೆ(ಮಾರುಕಟ್ಟೆ) ಎಂದು ಬಣ್ಣಿಸಿದ ಕೋರ್ಟ್, ಇದರ ಮೌಲ್ಯವು ಕೇವಲ ಅದರಲ್ಲಿರುವ ವಿಷಯಗಳಲ್ಲಿ ಮಾತ್ರವಲ್ಲದೇ, ವಯಸ್ಕರು ಮತ್ತು ಮಕ್ಕಳು ಇಬ್ಬರಿಗೂ ಅದು ಒದಗಿಸುವ ಪ್ರವೇಶಾವಕಾಶದಲ್ಲೂ ಅಡಗಿದೆ ಎಂದು ಹೇಳಿದೆ.

ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ವಾಸಿಸುವ ಅನೇಕ ಮಕ್ಕಳಿಗೆ ಕಲಿಕೆ ಮತ್ತು ಮಾಹಿತಿ ಪಡೆಯಲು ಇಂಟರ್ನೆಟ್ ಬಹುತೇಕ ಏಕೈಕ ಮೂಲವಾಗಿದೆ. ವಿಶೇಷ ಅಗತ್ಯಗಳಿರುವ ಮಕ್ಕಳಿಗೂ ಆನ್‌ಲೈನ್ ವೇದಿಕೆಗಳು ಮಹತ್ವದ ಅವಕಾಶಗಳನ್ನು ಒದಗಿಸಬಹುದು. ಇಂತಹ ವೇದಿಕೆಗಳ ಮೂಲಕ ಅವರು ಸ್ನೇಹಿತರನ್ನ ಕಂಡುಕೊಳ್ಳಬಹುದು ಹಾಗೂ ತಮ್ಮಂತೆಯೇ ಇರುವ ಇತರರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!