Monday, October 19, 2026
spot_imgspot_img
spot_imgspot_img

ಸೌಜನ್ಯ ಪ್ರಕರಣ: ವಕೀಲ ಅಮೃತೇಶ್ ವಿರುದ್ಧ ತಾಯಿ ಕುಸುಮಾವತಿ ದೂರು

- Advertisement -
- Advertisement -

ಬೆಳ್ತಂಗಡಿ: ಸೌಜನ್ಯ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಹೇಳಿಕೆ ನೀಡಿ ತನಿಖೆಯ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದು ಆರೋಪಿಸಿ, ವಕೀಲ ಎನ್.ಪಿ. ಅಮೃತೇಶ್ ವಿರುದ್ಧ ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅ.17ರಂದು ಸಲ್ಲಿಸಿರುವ ದೂರಿನಲ್ಲಿ, ಅ.13ರಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮೃತೇಶ್ ಅವರು ಸೌಜನ್ಯ ಅವರ ಪೋಷಕರು ಪ್ರಕರಣದಿಂದ ಹಣ ಸಂಪಾದಿಸಿದ್ದಾರೆ ಎಂದು ಆರೋಪಿಸಿದ್ದು, ಎಸ್‌ಐಟಿ ತನಿಖೆ ಯಶಸ್ವಿಯಾಗುವ ಸಾಧ್ಯತೆ ಕಡಿಮೆ ಎಂಬರ್ಥದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಇಂತಹ ಹೇಳಿಕೆಗಳು ಸಂತ್ರಸ್ತೆಯ ಕುಟುಂಬದ ಗೌರವಕ್ಕೆ ಧಕ್ಕೆ ತರುವುದರ ಜತೆಗೆ, ತನಿಖೆಗೆ ಸಹಕರಿಸಬಹುದಾದ ಸಂಭಾವ್ಯ ಸಾಕ್ಷಿಗಳ ಮೇಲೆ ಒತ್ತಡ ಉಂಟುಮಾಡುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ಸೆ.24ರಂದು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದು, ಅ.1ರಿಂದ ತನಿಖೆ ಆರಂಭವಾಗಿದೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಇಂತಹ ಹೇಳಿಕೆಗಳು ತನಿಖೆಯ ನಿಷ್ಪಕ್ಷಪಾತತೆ ಮತ್ತು ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲದೆ, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಹೆಚ್ಚುವರಿ ಅಫಿಡವಿಟ್‌ನಲ್ಲಿ ಹೆಸರಿಸಲಾದ ಎಂಟು ಸಂಭಾವ್ಯ ಸಾಕ್ಷಿಗಳು ಸೇರಿದಂತೆ ಸೌಜನ್ಯ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು. ಸಾಕ್ಷಿದಾರರ ರಕ್ಷಣಾ ಯೋಜನೆಯಡಿ ಅಪಾಯದ ಮೌಲ್ಯಮಾಪನ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕುಸುಮಾವತಿ ಗೌಡ ಅವರು ಮನವಿ ಮಾಡಿದ್ದಾರೆ.

ವಕೀಲ ವಿಜಯ್ ವಾಸು ಪೂಜಾರಿ ಅವರ ಮೂಲಕ ದೂರು ಸಲ್ಲಿಸಲಾಗಿದ್ದು, ಆರೋಪಗಳ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

- Advertisement -

Related news

error: Content is protected !!