


ವಿಟ್ಲ: ನಾಡಿನೆಲ್ಲೆಡೆ ದಸರಾ ಸಂಭ್ರಮ ಕಳೆಗಟ್ಟಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿಯೂ ಅ. 20ರಂದು ಆಯುಧ ಪೂಜೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಸದಾ ಗತ್ತು ಗಾಂಭೀರ್ಯದಿಂದ ಕೂಡಿರುವ ಪೊಲೀಸ್ ಠಾಣೆ ಹೂವು, ತೋರಣ ಸೇರಿದಂತೆ ವಿವಿಧ ಅಲಂಕಾರಗಳಿಂದ ಕಂಗೊಳಿಸುತ್ತಿತ್ತು. ಠಾಣೆಯಲ್ಲಿರುವ ವಾಹನಗಳು, ಪಿಸ್ತೂಲ್, ರೈಫಲ್ ಸೇರಿದಂತೆ ಎಲ್ಲಾ ಆಯುಧಗಳು ಹಾಗೂ ಇತರ ಪರಿಕರಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಆಗಮಿಸಿ, ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ವೇಳೆ ಪೊಲೀಸ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಠಾಣೆಯ ಎಲ್ಲಾ ಸಿಬ್ಬಂದಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಸಿಬ್ಬಂದಿಗಳ ಕುಟುಂಬಸ್ಥರು ಸಹ ಹಬ್ಬದ ಸಡಗರದಲ್ಲಿ ಭಾಗಿಯಾಗಿ ಸಂಭ್ರಮಿಸಿದರು.
ವರ್ಷಂಪ್ರತಿ ಒಂದಲ್ಲ ಒಂದು ಪ್ರಕರಣಗಳಲ್ಲಿ ಸದಾ ಕಾರ್ಯನಿರತರಾಗಿರುವ ಪೋಲಿಸರು ವರ್ಷದಲ್ಲಿ ಒಂದು ದಿನ ಕುಟುಂಬ ಸಮೇತ ತಾವು ಸೇವೆ ಸಲ್ಲಿಸುತ್ತಿರುವ ಠಾಣೆಯಲ್ಲಿ ಆಯುಧ ಪೂಜೆ ಸಂಭ್ರಮಾಚರಣೆ ನಡೆಸಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.








