


ಮುಂಬೈ: ಮುಂಬೈನ ಕುರ್ಲಾ ಪಶ್ಚಿಮದಲ್ಲಿರುವ 13 ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಮೂವರು ಮಕ್ಕಳು ಸೇರಿದಂತೆ ಒಟ್ಟು 9 ಮಂದಿ ಗಾಯಗೊಂಡಿದ್ದಾರೆ.
ವಿದ್ಯುತ್ ವೈರಿಂಗ್ ಮೂಲಕ ಬೆಂಕಿ ಹರಡಿ ಕಟ್ಟಡದಾದ್ಯಂತ ದಟ್ಟ ಹೊಗೆ ಆವರಿಸಿಕೊಂಡ ಪರಿಣಾಮ ಎಂಟು ಮಂದಿ ಉಸಿರಾಟದ ತೊಂದರೆಗೆ ಒಳಗಾಗಿದ್ದಾರೆ. ಮತ್ತೊಬ್ಬ ವ್ಯಕ್ತಿಯ ಕಾಲಿಗೆ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುರ್ಲಾದ ಕೊಹಿನೂರ್ ಎಚ್‌ಡಿಐಎಲ್ ಕಟ್ಟಡ ಸಂಖ್ಯೆ 5ರಲ್ಲಿ ಬೆಳಗ್ಗೆ 6.53ರ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಕಟ್ಟಡದಲ್ಲಿ ಹೊಗೆ ವ್ಯಾಪಿಸಿದ್ದು, ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಗಾಯಗೊಂಡವರಲ್ಲಿ ಐದು ವರ್ಷದ ಬಾಲಕ, ಇಬ್ಬರು ಹದಿಹರೆಯದ ಬಾಲಕಿಯರು ಹಾಗೂ ಹಿರಿಯ ನಾಗರಿಕರೂ ಸೇರಿದ್ದಾರೆ. ಎಲ್ಲ ಗಾಯಾಳುಗಳನ್ನು ಘಾಟ್‌ಕೋಪರ್‌ನ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಅಗ್ನಿ ಅವಘಡದ ಮಾಹಿತಿ ಲಭಿಸುತ್ತಿದ್ದಂತೆ ಮುಂಬೈ ಅಗ್ನಿಶಾಮಕ ದಳ, ಪೊಲೀಸರು, 108 ಆಂಬ್ಯುಲೆನ್ಸ್ ಸಿಬ್ಬಂದಿ ಹಾಗೂ ಸ್ಥಳೀಯ ವಾರ್ಡ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅಗ್ನಿಶಾಮಕ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ಬೆಳಗ್ಗೆ 7.21ರ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದರು.
ಪ್ರಾಥಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಅವಘಡಕ್ಕೆ ನಿಖರ ಕಾರಣ ತಿಳಿಯಲು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಕಟ್ಟಡದ ಅಗ್ನಿ ಸುರಕ್ಷತಾ ವ್ಯವಸ್ಥೆ ಹಾಗೂ ಆಸ್ತಿ ಹಾನಿಯ ಪ್ರಮಾಣದ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.








