Friday, October 23, 2026
spot_imgspot_img
spot_imgspot_img

ಮಾಂಜಾ ದಾರದಿಂದ ಜೀವಹಾನಿ ಸಹಿಸಲ್ಲ: ಕಠಿಣ ಕ್ರಮಕ್ಕೆ ಸರ್ಕಾರ ಬದ್ಧ- ಜಿ. ಪರಮೇಶ್ವರ್

- Advertisement -
- Advertisement -


ಬೆಂಗಳೂರು: ಗಾಳಿಪಟದ ಅಪಾಯಕಾರಿ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಹುಬ್ಬಳ್ಳಿಯ ವಿದ್ಯಾ ಮಂಜುನಾಥ ಗೌಡರ್ ಮೃತಪಟ್ಟಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನಿಷೇಧದ ಹೊರತಾಗಿಯೂ ಮಾಂಜಾ ದಾರದ ಮಾರಾಟ ಮತ್ತು ಬಳಕೆ ಮುಂದುವರಿಯುತ್ತಿರುವುದನ್ನು ತಡೆಯಲು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.


ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಮಾಂಜಾ ದಾರದ ಮಾರಾಟ ಮತ್ತು ಬಳಕೆಯ ಮೇಲಿನ ನಿಷೇಧವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ. ಈ ಸಂಬಂಧ ಸಂಬಂಧಪಟ್ಟ ಇಲಾಖೆಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯವಿದ್ದಲ್ಲಿ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಕೆಲವರ ಕ್ಷಣಿಕ ಮನೋರಂಜನೆಗಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ. ಗಾಳಿಪಟ ಹಾರಿಸುವ ಹವ್ಯಾಸ ಮತ್ತೊಬ್ಬರ ಜೀವಕ್ಕೆ ಅಪಾಯ ತಂದೊಡ್ಡುವ ಚಟುವಟಿಕೆಯಾಗಬಾರದು. ಅಪಾಯಕಾರಿ ದಾರಗಳ ಬಳಕೆಯಿಂದ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾದರೆ, ಅದಕ್ಕೆ ಕಾರಣರಾದವರು ಕಾನೂನಿನ ಪ್ರಕಾರ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮಾಂಜಾ ದಾರದಿಂದ ಕುತ್ತಿಗೆಗೆ ಗಾಯವಾಗಿ ಜೀವಹಾನಿಯಾಗುತ್ತಿರುವ ಘಟನೆಗಳು ಮರುಕಳಿಸುತ್ತಿದ್ದರೂ, ಅದರ ಅಪಾಯವನ್ನು ಅರಿತುಕೊಂಡು ಇಂತಹ ದಾರಗಳನ್ನು ಬಳಸುವುದು ನಿರ್ಲಕ್ಷ್ಯ ಮಾತ್ರವಲ್ಲ, ಅಪರಾಧ ಕೃತ್ಯವೂ ಆಗಬಹುದು ಎಂದು ತಿಳಿಸಿದ್ದಾರೆ.
ಗಾಳಿಪಟ ಹಾರಿಸುವುದು ಮನೋರಂಜನೆಗೆ ಸೀಮಿತವಾಗಿರಬೇಕು. ಅದನ್ನು ಅಪಾಯಕಾರಿ ಸ್ಪರ್ಧೆಯಾಗಿ ಪರಿವರ್ತಿಸುವುದಾಗಲಿ, ಇತರರ ಜೀವಕ್ಕೆ ಅಪಾಯ ಉಂಟುಮಾಡುವುದಾಗಲಿ ಒಪ್ಪಲು ಸಾಧ್ಯವಿಲ್ಲ. ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ, ಅಪಾಯಕಾರಿ ಮಾಂಜಾ ದಾರದ ಬಳಕೆಗೆ ಪರಿಣಾಮಕಾರಿ ಕಡಿವಾಣ ಹಾಕಲು ಸರ್ಕಾರ ದೃಢಸಂಕಲ್ಪ ಮಾಡಿದೆ ಎಂದು ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

- Advertisement -

Related news

error: Content is protected !!