

ಸುಬ್ರಹ್ಮಣ್ಯ: ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ ಎಸ್.ಎನ್.ಪಿ.ಯು ಕಾಲೇಜು ಸುಬ್ರಹ್ಮಣ್ಯದಲ್ಲಿ ಕೆಲವು ಉಪನ್ಯಾಸಕರು ಕಳೆದ ಕೆಲವು ವರ್ಷಗಳಿಂದ ಅನಧಿಕೃತವಾಗಿ ಸಿ.ಇ.ಟಿ ಕೋಚಿಂಗ್ ತರಗತಿಗಳನ್ನು ನಡೆಸುತ್ತಾ ವಿದ್ಯಾರ್ಥಿಗಳಿಂದ ಅಕ್ರಮವಾಗಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿ ದೂರು ಸಲ್ಲಿಕೆಯಾಗಿದೆ.

ಕಾಲೇಜಿನ ಆಡಳಿತ ಮಂಡಳಿ ಅಥವಾ ದೇವಸ್ಥಾನದ ಯಾವುದೇ ಅನುಮತಿ ಪಡೆಯದೆ, ಕಾಲೇಜಿನಲ್ಲಿಯೇ ಸಿಇಟಿ ತರಗತಿ ನಡೆಸಲಾಗುತ್ತಿದ್ದು, ಪ್ರತಿ ವಿದ್ಯಾರ್ಥಿಯಿಂದ ಸುಮಾರು 16,000 ರೂ.ಗಳಂತೆ ಯಾವುದೇ ರಶೀದಿ ನೀಡದೆ ಹಣ ವಸೂಲಿ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪ್ರಶ್ನಿಸಲು ಹೋದ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಉಪನ್ಯಾಸಕರು ಗದರಿಸಿ ಬೆದರಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ಪ್ರಕಾರ ಸರ್ಕಾರಿ ಅನುದಾನಿತ ಕಾಲೇಜಿನ ಶಿಕ್ಷಕರು ಕಾಲೇಜಿನ ಒಳಗೆ ಅಥವಾ ಹೊರಗೆ ಯಾವುದೇ ಖಾಸಗಿ ಕೋಚಿಂಗ್ ತರಗತಿ ನಡೆಸುವಂತಿಲ್ಲ. ನಿಯಮವನ್ನು ಗಾಳಿಗೆ ತೂರಿ ಅಕ್ರಮವಾಗಿ ಕೋಚಿಂಗ್ ನಡೆಸುತ್ತಿರುವ ಉಪನ್ಯಾಸಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ಎಸ್.ಎನ್.ಪಿ.ಯು ಕಾಲೇಜಿನ ಕಾರ್ಯದರ್ಶಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಬಗ್ಗೆ ಮಂಗಳೂರಿನ ವಕೀಲರಾದ ಜಗದೀಶ್ ರವರು ಸಹ ಕಾರ್ಯನಿರ್ವಹಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.








