Monday, November 2, 2026
spot_imgspot_img
spot_imgspot_img

DPDP ಕಾಯ್ದೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದು: ಕಳವಳ ನಿವಾರಣೆಗೆ ಸರಕಾರ ಸಿದ್ದ

- Advertisement -
- Advertisement -

ನವದೆಹಲಿ: ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ (DPDP) ಕಾಯ್ದೆಯು ಪತ್ರಿಕಾ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಉದ್ದೇಶ ಹೊಂದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು, ಪತ್ರಿಕಾ ಸ್ವಾತಂತ್ರ್ಯವು ಸಂವಿಧಾನದಿಂದ ಖಾತರಿಪಡಿಸಲ್ಪಟ್ಟ ಹಕ್ಕಾಗಿದ್ದು, ಅದನ್ನು ಸಂಪೂರ್ಣವಾಗಿ ರಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.

DPDP ಕಾಯ್ದೆಯ ಕೆಲವು ನಿಯಮಗಳು ಪತ್ರಿಕಾ ಸ್ವಾತಂತ್ರ್ಯ ಹಾಗೂ ತನಿಖಾ ಪತ್ರಿಕೋದ್ಯಮಕ್ಕೆ ತೊಂದರೆಯಾಗಬಹುದು ಎಂಬ ಆತಂಕವನ್ನು ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ (DNPA) ವ್ಯಕ್ತಪಡಿಸಿದೆ. ಈ ಸಂಬಂಧ ಅಸೋಸಿಯೇಷನ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಕಾಯ್ದೆಯ ಕೆಲವು ನಿಬಂಧನೆಗಳನ್ನು ಪ್ರಶ್ನಿಸಿದೆ.ಪತ್ರಕರ್ತರು ಸಾರ್ವಜನಿಕ ಹಿತಾಸಕ್ತಿಯ ವರದಿಗಳನ್ನು ಸಿದ್ಧಪಡಿಸುವಾಗ ವೈಯಕ್ತಿಕ ಮಾಹಿತಿಯನ್ನು ಬಳಸಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಪೂರ್ವಾನುಮತಿ ಮತ್ತು ಸಮ್ಮತಿ ಪಡೆಯುವ ನಿಯಮಗಳು ತನಿಖಾ ವರದಿಗಾರಿಕೆಗೆ ಅಡ್ಡಿಯಾಗಬಹುದು ಎಂಬುದು ಮಾಧ್ಯಮ ಸಂಸ್ಥೆಗಳ ಆತಂಕವಾಗಿದೆ.

ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ನವೆಂಬರ್ 17ರಂದು ಮುಂದಿನ ವಿಚಾರಣೆ ನಿಗದಿಪಡಿಸಿದೆ.ಈ ಕುರಿತು ಪ್ರತಿಕ್ರಿಯಿಸಿರುವ ಅಶ್ವಿನಿ ವೈಷ್ಣವ್, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಂಪಾದಕರೊಂದಿಗೆ ಮುಕ್ತ ಚರ್ಚೆಗೆ ಸರಕಾರ ಸಿದ್ಧವಿದೆ. ಕಾಯ್ದೆಯ ಬಗ್ಗೆ ಯಾವುದೇ ಗೊಂದಲ ಅಥವಾ ಆತಂಕಗಳಿದ್ದರೆ ಅವುಗಳನ್ನು ಆಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.ಪತ್ರಿಕಾ ಸ್ವಾತಂತ್ರ್ಯ ಮತ್ತು ನಾಗರಿಕರ ಖಾಸಗಿತನದ ಹಕ್ಕು ಎರಡನ್ನೂ ರಕ್ಷಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

Related news

error: Content is protected !!