


ಫ್ಲೋರಿಡಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೋ ರೆಸಾರ್ಟ್ನಿಂದ ಕೆಲವೇ ಮೈಲುಗಳ ದೂರದಲ್ಲಿ ಖಾಸಗಿ ವಿಮಾನವೊಂದು ಪತನಗೊಂಡು 9 ಮಂದಿ ಸಾವನಪ್ಪಿದ್ದಾರೆ.
ಭಾನುವಾರ ಮಧ್ಯಾಹ್ನ ಟೆಕ್ಸಾಸ್ನ ಆಸ್ಟಿನ್-ಬರ್ಗ್ಸ್ಟ್ರೋಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಹಾಮಾಸ್ಗೆ ತೆರಳುತ್ತಿದ್ದ ‘ಲಿಯರ್ಜೆಟ್ 60’ ಹೆಸರಿನ ವಿಮಾನವು ಮಧ್ಯಾಹ್ನ ಸುಮಾರು 12:50ಕ್ಕೆ ಪಾಮ್ ಬೀಚ್ ಕೌಂಟಿಯ ಗ್ರೀನ್ಏಕರ್ಸ್ ಬಳಿ ಕೆಳಮುಖವಾಗಿ ಧರೆಗುರುಳಿತು.
ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೋ ರೆಸಾರ್ಟ್ನಿಂದ ಕೇವಲ 11 ಕಿಲೋಮೀಟರ್ ದೂರದಲ್ಲಿರುವ ಪಾಮ್ ಬೀಚ್ ಕೌಂಟಿಯ ಕ್ರೆಸ್ಟ್ಹ್ಯಾವನ್ ವಸತಿ ಪ್ರದೇಶದ ಬಳಿ ಈ ಭೀಕರ ವಿಮಾನ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆಯ ಪಕ್ಕದಲ್ಲೇ ಬಿದ್ದ ವಿಮಾನವು ತಕ್ಷಣವೇ ಸ್ಫೋಟಗೊಂಡು ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿತು. ಈ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಸ್ಥಳದಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿದೆ.
ಅಮೆರಿಕದ ಸಾರಿಗೆ ಕಾರ್ಯದರ್ಶಿ ಶಾನ್ ಡಫಿ ಅವರು ಈ ಘಟನೆಯನ್ನು ಭೀಕರ ದುರಂತ ಎಂದು ಕರೆದಿದ್ದು, ವಿಮಾನದಲ್ಲಿದ್ದ ಎಲ್ಲಾ 9 ಪ್ರಯಾಣಿಕರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಆದರೆ ನೆಲದ ಮೇಲಿದ್ದ ಯಾರಿಗೂ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ ಎಂದು ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅವರು, “ಇದು ಅತ್ಯಂತ ವಿನಾಶಕಾರಿ ಅಪಘಾತ. ವಿಮಾನವು ಕ್ಷಿಪಣಿಯಂತೆ ವೇಗವಾಗಿ ಕೆಳಗೆ ಬಂದು ರಸ್ತೆಯ ಬದಿಯಲ್ಲಿ ಬಿದ್ದಿದೆ,” ಎಂದು ಹೇಳಿದ್ದಾರೆ.
ಫ್ಲೈಟ್ ಟ್ರ್ಯಾಕಿಂಗ್ ಡೇಟಾ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಸಂಭಾಷಣೆಯ ಪ್ರಕಾರ, ವಿಮಾನವು 35,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಪ್ರಕ್ಷುಬ್ಧ ವಾತಾವರಣ, ಮಳೆ ಸಮಸ್ಯೆಯನ್ನು ಎದುರಿಸಿತು. ಈ ಹಿನ್ನೆಲೆಯಲ್ಲಿ ಪೈಲಟ್ಗಳು ಎತ್ತರಕ್ಕೆ ಹಾರಲು ಅನುಮತಿ ಕೋರಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಯಿತು.
ವಿಮಾನವು ನಿಮಿಷಕ್ಕೆ 10,000 ಅಡಿ, ನಂತರ 20,000 ಅಡಿ ಹಾಗೂ ಕೊನೆಗೆ 30,000 ಅಡಿಗಳವರೆಗೆ ಅತಿಯಾದ ವೇಗದಲ್ಲಿ ಕೆಳಮುಖವಾಗಿ ಧುಮುಕಲಾರಂಭಿಸಿತು. “ಮೇಡೇ, ಮೇಡೇ… ನಾವು ನಿಮಿಷಕ್ಕೆ 20,000 ಅಡಿಗಳಷ್ಟು ವೇಗವಾಗಿ ಕೆಳಗೆ ಬೀಳುತ್ತಿದ್ದೇವೆ, ನಾವು ನೆಲಕ್ಕೆ ಅಪ್ಪಳಿಸಲಿದ್ದೇವೆ” ಎಂದು ಪೈಲಟ್ ಕೊನೆಯ ಬಾರಿಗೆ ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸಿದ್ದರು. ನಂತರ ವಿಮಾನವು ತೀವ್ರವಾಗಿ ಬಲಕ್ಕೆ ತಿರುಗಿ ನೆಲಕ್ಕೆ ಅಪ್ಪಳಿಸಿತು.
ಅಪಘಾತ ಸಂಭವಿಸಿದ ಸ್ಥಳದ ಸಮೀಪದಲ್ಲಿದ್ದ ಮೊಬೈಲ್ ಹೋಮ್ ಸಮುದಾಯದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 600 ಜನರನ್ನು ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಮತ್ತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಜಂಟಿಯಾಗಿ ಈ ದುರಂತದ ಕುರಿತು ಸಮಗ್ರ ತನಿಖೆ ಆರಂಭಿಸಿವೆ. ಘಟನೆಯ ಸಮಯದಲ್ಲಿ ಆ ಭಾಗದಲ್ಲಿ ಭಾರೀ ಮಳೆಯಾಗುತ್ತಿತ್ತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.







