
ಮಂಗಳೂರು, ನ.2: ಸೌಜನ್ಯ ಪ್ರಕರಣದ ಮರು ತನಿಖೆಗೆ ಸಂಬಂಧಿಸಿ ನೇಮಕವಾಗಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ನೂತನ ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಅವರು ಮಂಗಳವಾರ ಮಂಗಳೂರಿಗೆ ಆಗಮಿಸಿ, ತನಿಖೆ ಆರಂಭಿಸಿದ್ದಾರೆ.

ಮಂಗಳೂರಿನ ಹಳೆ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿರುವ ಎಸ್‌ಐಟಿ ಕಚೇರಿಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಸೇರಿದಂತೆ ಕುಟುಂಬದ ಸದಸ್ಯರು ವಿಚಾರಣೆಗೆ ಸೋಮವಾರ ಹಾಜರಾಗಿದ್ದಾರೆ.

ಪ್ರಕರಣದ ದೂರುದಾರ ಹಾಗೂ ಸೌಜನ್ಯ ಮಾವ ಪುರಂದರ ಗೌಡ, ಇನ್ನೊಬ್ಬ ಮಾವ ವಿಠಲ ಗೌಡ, ಸಂಬಂಧಿ ಜಗದೀಶ್ ಗೌಡ, ಸಾಕ್ಷಿದಾರೆ ಯಶೋಧಾ ವಿಚಾರಣೆಗೆ ಹಾಜರಾಗಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಸೌಜನ್ಯ ಪ್ರಕರಣದ ಮರು ತನಿಖೆಗೆ ರಾಜ್ಯ ಸರಕಾರ ಶಶಿಕುಮಾರ್ ನೇತೃತ್ವದ ಎಸ್‌ಐಟಿ ತಂಡ ರಚಿಸಿತ್ತು. ಈ ನಡುವೆ ವೈಯಕ್ತಿಕ ಕಾರಣಗಳಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಶಶಿಕುಮಾರ್ ಹಾಗೂ ಅದಕ್ಕೂ ಮೊದಲು ತನಿಖಾ ತಂಡದ ಸದಸ್ಯರಾಗಿ ನೇಮಕ ಮಾಡಲಾಗಿದ್ದ ವೆಂಕಟೇಶ್ ಪ್ರಸನ್ನ ಅವರು ಹಿಂದೆ ಸರಿದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ತಂಡದ ನೂತನ ಮುಖ್ಯಸ್ಥರಾಗಿ ಚೇತನ್ ಸಿಂಗ್ ರಾಥೋಡ್ ಹಾಗೂ ಎಸಿಪಿ ಶ್ರೀನಿಧಿ ಅವರನ್ನು ನೇಮಕ ಮಾಡಿತ್ತು.
ಎಸ್‌ಐಟಿ ಮುಖ್ಯಸ್ಥರಾಗಿ ನೇಮಕ ಗೊಂಡ ಬಳಿಕ ಚೇತನ್ ಸಿಂಗ್ ರಾಥೋಡ್ ಅವರು ಪ್ರಥಮ ಬಾರಿಗೆ ಮಂಗಳೂರಿನ ಎಸ್‌ಐಟಿ ಕಚೇರಿಗೆ ಸೋಮವಾರ ಭೇಟಿ ನೀಡಿದ್ದರು. ತಂಡದ ಸದಸ್ಯರಾದ ಸುಧೀರ್ ಕುಮಾರ್ ರೆಡ್ಡಿ ಹಾಗೂ ನಿಶಾ ಜೇಮ್ಸ್ ಕೂಡಾ ಗುರುವಾರ ವಿಚಾರಣೆಯಲ್ಲಿ ಭಾಗವಹಿಸಿದ್ದರು.








