ಬೆಂಗಳೂರು : ದೀಪಾವಳಿ ಹಬ್ಬ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರಿಸರ ಸ್ನೇಹಿ ಹಾಗೂ ಸುರಕ್ಷಿತ ರೀತಿಯಲ್ಲಿ ಹಬ್ಬವನ್ನು ಆಚರಿಸಲು ಅನುಕೂಲವಾಗುವಂತೆ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ರಾತ್ರಿ 8 ರಿಂದ 10 ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿರುತ್ತದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಆಸ್ಪತ್ರೆಗಳು, ಪೆಟ್ರೋಲ್ ಬಂಕ್ಗಳು, ಗ್ಯಾಸ್ ಸ್ಟೇಷನ್ಗಳು, ಧಾರ್ಮಿಕ ಕೇಂದ್ರಗಳು, ವೃದ್ಧಾಶ್ರಮಗಳು ಮತ್ತು ಶಿಶುಪಾಲನಾ ಕೇಂದ್ರಗಳ ಸುತ್ತಮುತ್ತ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ರಸ್ತೆಗಳು ಹಾಗೂ ನಿಲ್ಲಿಸಿದ ವಾಹನಗಳ ಬಳಿ ಪಟಾಕಿ ಸಿಡಿಸಬಾರದು. ತೆರೆದ ಮೈದಾನಗಳು ಹಾಗೂ ಕಡಿಮೆ ಜನರಿರುವ ಸ್ಥಳಗಳನ್ನು ಬಳಸಬೇಕು. ಅಧಿಕೃತ ಪರವಾನಿಗೆ ಹೊಂದಿರುವ ಅಂಗಡಿಗಳಿಂದ ಮಾತ್ರ ಗುಣಮಟ್ಟದ ಹಸಿರು ಪಟಾಕಿಗಳನ್ನು ಖರೀದಿಸಬೇಕು. ಪಟಾಕಿಯ ಅಸಲೀಯತೆಯನ್ನು ಖಚಿತಪಡಿಸಿಕೊಳ್ಳಲು ಪ್ಯಾಕೇಟ್ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪರಿಶೀಲಿಸುವುದು ಕಡ್ಡಾಯವಾಗಿದೆ.

ಪಟಾಕಿ ಸಿಡಿಸುವಾಗ ಸುರಕ್ಷಿತ ಕಣ್ಣಿನ ಕನ್ನಡಕ ಹಾಗೂ ಕೈಗವಸುಗಳನ್ನು ಧರಿಸುವುದು ಸೂಕ್ತವಾಗಿದೆ. ಪಟಾಕಿ ಸಿಡಿಸುವಾಗ ಹತ್ತಿ ಉಡುಪುಗಳನ್ನೇ ಧರಿಸಬೇಕು. ನೈಲಾನ್, ಸಿಂಥೆಟಿಕ್ ಅಥವಾ ಪಾಲಿಯೆಸ್ಟರ್ ಬಟ್ಟೆಗಳನ್ನು ಧರಿಸಬಾರದು. ಪಟಾಕಿಯನ್ನು ಕೈಯಲ್ಲಿ ಹಿಡಿದುಕೊಂಡು ಸಿಡಿಸುವುದು ತೀವ್ರಅಪಾಯಕಾರಿಯಾಗಿದೆ. ವಿಶೇಷವಾಗಿ ಮುಖ, ಕಣ್ಣು ಹಾಗೂ ಕಿವಿಗಳಿಗೆ ಹಾನಿಯಾಗದಂತೆ ಜಾಗ್ರತೆ ವಹಿಸಬೇಕು.

ಪಟಾಕಿ ಸಿಡಿಸುವ ಸ್ಥಳದಲ್ಲಿ ನೀರು, ಮರಳು, ಅಗ್ನಿಶಾಮಕ ಉಪಕರಣಗಳು ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಸಣ್ಣ ಮಕ್ಕಳು ಹಿರಿಯರ ಮೇಲ್ವಿಚಾರಣೆಯಿಲ್ಲದೆ ಪಟಾಕಿ ಸಿಡಿಸದಂತೆ ಪೋಷಕರು ಗಮನಹರಿಸಬೇಕು.
ಯಾವುದೇ ರೀತಿಯ ಅಗ್ನಿ ಅವಘಡ ಅಥವಾ ತುರ್ತು ಪರಿಸ್ಥಿತಿಯಲ್ಲಿ ತಕ್ಷಣವೇ 112 (ಪೊಲೀಸ್/ಅಗ್ನಿಶಾಮಕ) ಅಥವಾ 108 (ಆ್ಯಂಬುಲೆನ್ಸ್) ಸಂಖ್ಯೆಯನ್ನು ಸಂಪರ್ಕಿಸಿ ವೈದ್ಯಕೀಯ ನೆರವು ಪಡೆಯಬೇಕು ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.








