


ಬೆಂಗಳೂರು: ರಾಜ್ಯದ ಜನತೆಗೆ ಬೆಲೆ ಏರಿಕೆಯ ಮತ್ತೊಂದು ಶಾಕ್ ಎದುರಾಗಿದೆ. ಹಾಲು ಮತ್ತು ಮೊಸರಿನ ದರ ಹೆಚ್ಚಳದ ಬೆನ್ನಲ್ಲೇ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (KMF) ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನ್ನೀರ್ ಬೆಲೆಯನ್ನೂ ಏರಿಕೆ ಮಾಡಿದೆ. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ.
ನಂದಿನಿ ತುಪ್ಪದ ದರದಲ್ಲಿ ಗಣನೀಯ ಏರಿಕೆ ಮಾಡಲಾಗಿದ್ದು, ಪ್ರತಿ ಲೀಟರ್‌ಗೆ 750 ರೂ. ಇದ್ದ ಬೆಲೆಯನ್ನು 850 ರೂ.ಗೆ ಹೆಚ್ಚಿಸಲಾಗಿದೆ. ಸ್ಯಾಚೆಟ್ ತುಪ್ಪದ ದರ 715 ರೂ.ನಿಂದ 850 ರೂ.ಗೆ ಹಾಗೂ ಪೆಟ್ ಜಾರ್ ತುಪ್ಪದ ದರ 735 ರೂ.ನಿಂದ 870 ರೂ.ಗೆ ಏರಿಕೆಯಾಗಿದೆ. ವಾಣಿಜ್ಯ ಬಳಕೆಯ 15 ಕೆ.ಜಿ. ತುಪ್ಪದ ಟಿನ್ ಬೆಲೆ 11,625 ರೂ.ನಿಂದ 14,100 ರೂ.ಗೆ ಹೆಚ್ಚಳವಾಗಿದೆ.ಇನ್ನು ಪನ್ನೀರ್ ಬೆಲೆಯೂ ಏರಿಕೆಯಾಗಿದ್ದು, ಪ್ರತಿ ಕೆ.ಜಿ.ಗೆ 408 ರೂ. ಇದ್ದ ದರ ಇದೀಗ 485 ರೂ.ಗೆ ತಲುಪಿದೆ.ಬೆಣ್ಣೆಯ ದರದಲ್ಲಿಯೂ ಕೆಎಂಎಫ್ ಪರಿಷ್ಕರಣೆ ಮಾಡಿದೆ.
ಬೆಣ್ಣೆಯ ಬೆಲೆ 700 ರೂ.ನಿಂದ 780 ರೂ.ಗೆ ಹೆಚ್ಚಳವಾಗಿದೆ. 500 ಗ್ರಾಂ ಉಪ್ಪು ಸಹಿತ ಬೆಣ್ಣೆಯ ದರ 310 ರೂ.ನಿಂದ 380 ರೂ.ಗೆ ಏರಿಕೆಯಾಗಿದೆ. ಉಪ್ಪಿಲ್ಲದ 500 ಗ್ರಾಂ ಬೆಣ್ಣೆಯ ಬೆಲೆ 330 ರೂ.ನಿಂದ 390 ರೂ.ಗೆ ಹೆಚ್ಚಿಸಲಾಗಿದೆ.ಅದೇ ರೀತಿ 200 ಗ್ರಾಂ ಉಪ್ಪಿಲ್ಲದ ಬೆಣ್ಣೆಯ ದರ 135 ರೂ.ನಿಂದ 160 ರೂ.ಗೆ ಹಾಗೂ ಬೆಣ್ಣೆ ಬ್ಲಿಸ್ಟರ್ ಪ್ಯಾಕ್ ಬೆಲೆ 80 ರೂ.ನಿಂದ 90 ರೂ.ಗೆ ಏರಿಕೆಯಾಗಿದೆ.ನಿತ್ಯ ಬಳಕೆಯ ಹಾಲಿನ ಉತ್ಪನ್ನಗಳ ಬೆಲೆ ಸತತವಾಗಿ ಹೆಚ್ಚಳವಾಗುತ್ತಿರುವುದು ಸಾಮಾನ್ಯ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಬಜೆಟ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈಗಾಗಲೇ ಹಾಲು ಮತ್ತು ಮೊಸರಿನ ದರ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರಿಗೆ ನಂದಿನಿಯ ಇತರ ಉತ್ಪನ್ನಗಳ ಬೆಲೆ ಹೆಚ್ಚಳ ಮತ್ತಷ್ಟು ಹೊರೆಯಾಗಲಿದೆ.








