ಕೆಎಸ್‌ಆರ್‌ಟಿಸಿ ವರ್ಕರ್ಸ್ ಯೂನಿಯನ್ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿಗೆ ದೂರು


ಪುತ್ತೂರು: ಕರ್ತವ್ಯದಲ್ಲಿದ್ದ ಕೆಎಸ್‌ಆರ್‌ಟಿಸಿ ನಿರ್ವಾಹಕರ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿರುವ ಘಟನೆಯನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆಎಸ್ ಆರ್ ಟಿ ಸಿ ವರ್ಕರ್ಸ್ ಯೂನಿಯನ್ ವತಿಯಿಂದ (ಪುತ್ತೂರು ವಿಭಾಗ) ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಲಾಗಿದೆ.
ದಿನಾಂಕ ಮಾರ್ಚ್ 24 ರಂದು ಬಿ.ಸಿ.ರೋಡ್ ಘಟಕದ ನಿರ್ವಾಹಕ ಪ್ರಶಾಂತ್ ಅವರು ಪಕಳಕುಂಜ-ವಿಟ್ಲ ಮಾರ್ಗದ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ವಿಟ್ಲ ಠಾಣಾ ವ್ಯಾಪ್ತಿಯ ಮುಳಿಯ ಎಂಬಲ್ಲಿ ಎದುರಿನಿಂದ ಬಂದ ಟಿಪ್ಪರ್ ಲಾರಿಯೊಂದು ಬಸ್ಸಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಗ್ಗೆ ವಿಚಾರಿಸಲು ಹೋದಾಗ ಲಾರಿ ಚಾಲಕ ಬಿಲಾಲ್ ಎಂಬಾತ ನಿರ್ವಾಹಕ ಪ್ರಶಾಂತ್ ಅವರಿಗೆ ಅವಾಚ್ಯವಾಗಿ ಬೈದು ಸಾರ್ವಜನಿಕರ ಮುಂದೆಯೇ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಘಟನೆಯ ವಿಡಿಯೋ ಮಾಡುತ್ತಿದ್ದವರನ್ನೂ ತಡೆದು ಗಲಾಟೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಗೊಳಗಾದ ಪ್ರಶಾಂತ್ ವಿಟ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಸ್ಥಳ ಮಹಜರು ನಡೆಸುವ ಸಂದರ್ಭದಲ್ಲಿ ಸುಧೀರ್ ಮಣಿಯಾಣಿ ಎಂಬ ವ್ಯಕ್ತಿಯು ಪೊಲೀಸರ ಮುಂದೆಯೇ, “ದೂರು ವಾಪಸ್ ಪಡೆಯದಿದ್ದರೆ ನಿನ್ನನ್ನು ಮುಗಿಸಿ ಜೈಲಿಗೆ ಹೋಗುವುದಾಗಿ” ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಸಂಘಟನೆ ಆರೋಪಿಸಿದೆ.
ಆರೋಪಿಗಳು ಪೊಲೀಸರ ಮುಂದೆಯೇ ಬೆದರಿಕೆ ಹಾಕುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಕಾರ್ಮಿಕರಿಗೆ ರಕ್ಷಣೆ ನೀಡಬೇಕು ಮತ್ತು ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಮಾಫ್ಟ್ & ವರ್ಕರ್ಸ್ ಯೂನಿಯನ್ ಪುತ್ತೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಕೋಚಣ್ಣ ಪೂಜಾರಿ ಹಾಗೂ ನಿಯೋಗ ಜಿಲ್ಲಾ ಪೊಲೀಸ್ ಅಧೀಕ್ಷಕರಲ್ಲಿ ವಿನಂತಿಸಿದ್ದಾರೆ.








