Sunday, November 15, 2026
spot_imgspot_img
spot_imgspot_img

ಮದುವೆ ದಾಖಲೆ ಇಲ್ಲದಿದ್ದರೂ ಪರಿಹಾರಕ್ಕೆ ಅರ್ಹತೆ; ಮಹಿಳೆಗೆ 20 ಲಕ್ಷ ರೂ. ನೀಡಲು ಬೆಂಗಳೂರು ಕೋರ್ಟ್ ಆದೇಶ

- Advertisement -
- Advertisement -

ಬೆಂಗಳೂರು: ಕಾನೂನುಬದ್ಧ ವಿವಾಹಕ್ಕೆ ದಾಖಲೆ ಅಥವಾ ಪ್ರಮಾಣಪತ್ರ ಇಲ್ಲದಿದ್ದರೂ, ದಂಪತಿಯಂತೆ ಜೊತೆಯಾಗಿ ಬಾಳ್ವೆ ನಡೆಸಿದ ಮಹಿಳೆಗೆ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪರಿಹಾರ ಪಡೆಯುವ ಹಕ್ಕಿದೆ ಎಂದು ಬೆಂಗಳೂರಿನ 62ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ 56 ವರ್ಷದ ಮಹಿಳೆಗೆ ಒಟ್ಟು 20 ಲಕ್ಷ ರೂ. ಪರಿಹಾರ ನೀಡುವಂತೆ ಎದುರುದಾರರಿಗೆ ಆದೇಶಿಸಿದೆ.ಮದುವೆಯಾಗಿರುವುದಕ್ಕೆ ಸೂಕ್ತ ದಾಖಲೆಗಳಿಲ್ಲ ಎಂಬ ಕಾರಣ ನೀಡಿ 2024ರ ಅಕ್ಟೋಬರ್ 16ರಂದು ವಿಚಾರಣಾ ನ್ಯಾಯಾಲಯ ಮಹಿಳೆಯ ದೂರನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಘವೇಂದ್ರ ಎಸ್. ಚನ್ನಬಸಪ್ಪ ಅವರು ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ್ದಾರೆ.

ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪರಿಹಾರ ಪಡೆಯಲು ಕಾನೂನುಬದ್ಧ ವಿವಾಹವೇ ಏಕೈಕ ಮಾನದಂಡವಲ್ಲ. ಮಹಿಳೆಯ ಹೇಳಿಕೆ, ಪೂರಕ ದಾಖಲೆಗಳು ಹಾಗೂ ಎದುರುದಾರನ ಒಪ್ಪಿಗೆಯಿಂದ ಅವರ ನಡುವೆ ಕೌಟುಂಬಿಕ ಸಂಬಂಧವಿತ್ತು ಎಂಬುದು ಸಾಬೀತಾದರೆ ಪರಿಹಾರ ನೀಡಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ಪ್ರಕರಣದ ಹಿನ್ನೆಲೆ2001ರಿಂದ 2003ರ ನಡುವೆ ಮಹಿಳೆಗೆ ಅಧಿಕಾರಿಯೊಬ್ಬರ ಪರಿಚಯವಾಗಿತ್ತು. 2005ರಲ್ಲಿ ಮೊದಲ ಪತಿಯಿಂದ ವಿಚ್ಛೇದನ ಪಡೆದ ಬಳಿಕ, ಅದೇ ವರ್ಷದ ಆಗಸ್ಟ್ 7ರಂದು ಆತ ತನ್ನನ್ನು ವಿವಾಹವಾಗಿದ್ದಾಗಿ ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಆತನಿಗೆ ಈಗಾಗಲೇ ಮದುವೆಯಾಗಿರುವ ವಿಚಾರ ನಂತರ ತಿಳಿದುಬಂದಿತ್ತು.

2009-10ರ ಅವಧಿಯಲ್ಲಿ ತಾನು ಹಾಗೂ ತನ್ನ ಮಗಳು ಆತನೊಂದಿಗೆ ವಾಸವಿದ್ದೆವು. ಮಗಳ ಶಿಕ್ಷಣ ಮತ್ತು ಇತರ ಅಗತ್ಯಗಳಿಗೆ ಆತ ನೆರವಾಗಿದ್ದ ಎಂದು ಮಹಿಳೆ ಹೇಳಿದ್ದರು. ಅಲ್ಲದೆ, ಆಸ್ತಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದಲ್ಲದೆ, ಚೀಟಿ ವ್ಯವಹಾರದ 10 ಲಕ್ಷ ರೂ. ಹಾಗೂ ಸೈಟ್ ಖರೀದಿಗೆ ಸಾಲವಾಗಿ ನೀಡಿದ್ದ 4.80 ಲಕ್ಷ ರೂ.ಗಳನ್ನು ಹಿಂದಿರುಗಿಸದೆ ವಂಚಿಸಿದ್ದಾನೆ ಎಂದು ಆರೋಪಿಸಿದ್ದರು.

ವಿಚಾರಣೆ ವೇಳೆ ಎದುರುದಾರನು ಮದುವೆ ಹಾಗೂ ಕೌಟುಂಬಿಕ ಸಂಬಂಧವನ್ನು ನಿರಾಕರಿಸಿ, ತಮ್ಮ ನಡುವೆ ಸ್ನೇಹ ಮತ್ತು ಆರ್ಥಿಕ ವ್ಯವಹಾರ ಮಾತ್ರ ಇತ್ತು ಎಂದು ವಾದಿಸಿದ್ದ. ಆದರೆ, ಮಹಿಳೆಯ ಮಗಳಿಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಿರುವುದು, ಆಕೆಯ ಶಿಕ್ಷಣಕ್ಕೆ ನೆರವಾಗಿರುವುದು ಸೇರಿದಂತೆ ಹಲವು ಅಂಶಗಳು ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದವು.ಇದಲ್ಲದೆ, 2014ರಲ್ಲಿ ಆತ ಮತ್ತೊಬ್ಬ ಮಹಿಳೆಯೊಂದಿಗೆ ಸಲ್ಲಿಸಿದ್ದ ಸಿವಿಲ್ ದಾವೆಯಲ್ಲಿ ಸಂತ್ರಸ್ತ ಮಹಿಳೆಯನ್ನು ತನ್ನ ‘ಎರಡನೇ ಪತ್ನಿ’ ಎಂದು ಉಲ್ಲೇಖಿಸಿದ್ದ ಸಂಗತಿಯನ್ನು ನ್ಯಾಯಾಲಯ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದೆ. ವಾಸಸ್ಥಳದ ದಾಖಲೆಗಳು ಹಾಗೂ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ಪರಿಶೀಲಿಸಿದ ನ್ಯಾಯಾಲಯ, ಇವರಿಬ್ಬರ ಸಂಬಂಧವು ವಿವಾಹ ಸ್ವರೂಪದ ಸಂಬಂಧವಾಗಿತ್ತು ಎಂದು ತೀರ್ಮಾನಿಸಿದೆ.

20 ಲಕ್ಷ ರೂ. ಪರಿಹಾರಕ್ಕೆ ಆದೇಶ

ಎದುರುದಾರನ ವರ್ತನೆಯಿಂದ ಮಹಿಳೆಗೆ ಮಾನಸಿಕ ನೋವು, ಅವಮಾನ ಮತ್ತು ಯಾತನೆ ಉಂಟಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಸೆಕ್ಷನ್ 20ರ ಅಡಿಯಲ್ಲಿ 10 ಲಕ್ಷ ರೂ. ಆರ್ಥಿಕ ನೆರವು ಹಾಗೂ ಸೆಕ್ಷನ್ 22ರ ಅಡಿಯಲ್ಲಿ 10 ಲಕ್ಷ ರೂ. ಪರಿಹಾರ ಸೇರಿ ಒಟ್ಟು 20 ಲಕ್ಷ ರೂ. ನೀಡುವಂತೆ ಆದೇಶಿಸಿದೆ.ಇದೇ ವೇಳೆ, ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿ ಮಹಿಳೆಯ ವಾಸದ ಹಕ್ಕನ್ನು ನ್ಯಾಯಾಲಯ ಮಾನ್ಯ ಮಾಡಿದೆ. ಆದರೆ ಸೆಕ್ಷನ್ 18 ಮತ್ತು 19ರ ಅಡಿಯಲ್ಲಿ ಕೋರಲಾಗಿದ್ದ ರಕ್ಷಣೆ ಹಾಗೂ ಪ್ರತ್ಯೇಕ ವಾಸದ ಆದೇಶದ ಮನವಿಗಳನ್ನು ತಿರಸ್ಕರಿಸಿದೆ ಎಂದು ವರದಿಯಾಗಿದೆ.

- Advertisement -

Related news

error: Content is protected !!