

ಕುಂದಾಪುರ: ಉದ್ಯೋಗದ ಸಲುವಾಗಿ ಬೈಕ್ನಲ್ಲಿಬೆಂಗಳೂರಿಗೆ ತೆರಳುತ್ತಿದ್ದ ಬೈಂದೂರು ತಾಲೂಕಿನ ನಾಡ-ಪಡುಕೋಣೆ ಸಮೀಪದ ಚುಂಗಿಗುಡ್ಡೆ ನಿವಾಸಿ ಪ್ರತಿಭಾವಂತ ಯುವ ಇಂಜಿನಿಯರ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಮೀಪ ಸಂಭವಿಸಿದೆ.

ಚುಂಗಿಗುಡ್ಡೆ ನಿವಾಸಿ ನಾರಾಯಣ ಹೆಬ್ಬಾರ್ ಅವರ ಪುತ್ರ ಅಕ್ಷಯ್ ಎನ್. ಹೆಬ್ಬಾರ್ (26) ಅಪಘಾತದಲ್ಲಿ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.ಅಕ್ಷಯ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳಿಸಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಪಡೆದಿದ್ದರು.

ವರ್ಕ್ ಪ್ರಮ್ ಹೋಮ್ ಮೂಲಕ ಕೆಲಸ ಮಾಡುತ್ತಿದ್ದ ಅವರು, ತಿಂಗಳಿಗೊಮ್ಮೆ ಕಚೇರಿಗೆ ಭೇಟಿ ನೀಡಬೇಕಿದ್ದು ಈ ಹಿನ್ನೆಲೆಯಲ್ಲಿ ತಮ್ಮ ಬೈಕ್ನಲ್ಲಿ ರವಿವಾರ ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಚುಂಗಿಗುಡ್ಡೆಯಲ್ಲಿರುವ ಮನೆಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಚನ್ನರಾಯಪಟ್ಟಣ ಸಮೀಪ ಟ್ರಕ್ಗೆ ಬೈಕ್ನ ಹ್ಯಾಂಡಲ್ನ ಭಾಗ ತಾಗಿ, ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ.
ಅಕ್ಷಯ್ ತಂದೆ ನಾರಾಯಣ ಹೆಬ್ಬಾರ್ ಎಲ್ಐಸಿ ಏಜೆಂಟ್ ಆಗಿದ್ದು, ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.








